Gujarat | ದೇವಸ್ಥಾನದ ಸ್ನಾನಗೃಹದಲ್ಲಿ ವಿದ್ಯಾರ್ಥಿನಿಯರಿಬ್ಬರು ಶವವಾಗಿ ಪತ್ತೆ

Photo Credit : NDTV
ಸೂರತ್, ಮಾ.7: ಇಲ್ಲಿಯ ಸ್ವಾಮಿನಾರಾಯಣ ದೇವಸ್ಥಾನ ಸಂಕೀರ್ಣದ ಸ್ನಾನಗೃಹದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆಯಾಗಿವೆ. ಅವರು ವಿಷಕಾರಿ ಔಷಧಿಗಳ ಚುಚ್ಚುಮದ್ದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ.
ಅವರಿಬ್ಬರೂ ಶುಕ್ರವಾರ ಬೆಳಿಗ್ಗೆ ಕಾಲೇಜಿಗೆಂದು ಮನೆಯಿಂದ ಹೊರಬಿದ್ದಿದ್ದರು. ಆದರೆ ಅಪರಾಹ್ನವಾದರೂ ಮರಳಿರಲಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ನಾಪತ್ತೆ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅವರ ಮೊಬೈಲ್ ಫೋನ್ ಗಳ ಕೊನೆಯ ಲೊಕೇಷನ್ ಗಳ ಆಧಾರದ ಮೇಲೆ ಅವರು ದೇವಸ್ಥಾನ ಸಂಕೀರ್ಣದಲ್ಲಿದ್ದರು ಎನ್ನುವುದನ್ನು ಪೋಲಿಸರು ಪತ್ತೆ ಹಚ್ಚಿದ್ದರು. ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿದಾಗ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಲಾಗಿದ್ದ ವಿದ್ಯಾರ್ಥಿನಿಯರ ಸ್ಕೂಟರ್ಗಳು ಪತ್ತೆಯಾಗಿದ್ದವು.
ವಿದ್ಯಾರ್ಥಿನಿಯರು ಸ್ನಾನಗೃಹದತ್ತ ನಡೆದುಕೊಂಡು ಹೋಗುತ್ತಿರುವುದು ದೇವಸ್ಥಾನ ಸಂಕೀರ್ಣದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೋಲಿಸರು ಸ್ಥಳಕ್ಕೆ ತಲುಪಿದಾಗ ಸ್ನಾನಗೃಹವನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ಪೋಲಿಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆಯಾಗಿದ್ದು, ಬಳಿಯಲ್ಲಿ ವಿಷಕಾರಿ ಔಷಧಿಗಳ ಮೂರು ಬಾಟ್ಲಿಗಳು ಮತ್ತು ಸಿರಿಂಜ್ ಬಿದ್ದಿದ್ದವು.
ವಿದ್ಯಾರ್ಥಿನಿಯರು AI ವೇದಿಕೆಯೊಂದರಲ್ಲಿ ‘ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ’ ಎಂಬ ಕುರಿತು ಹುಡುಕಾಟ ನಡೆಸಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ಪೋಲಿಸರು ವಿದ್ಯಾರ್ಥಿನಿಯರ ಮೊಬೈಲ್ ಫೋನ್ಗಳು, ಸಿರಿಂಜ್ ಮತ್ತು ಔಷಧಿಗಳ ಬಾಟ್ಲಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
ದಿಂಡೋಲಿ ಠಾಣೆ ಪೋಲಿಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಮತ್ತು ವಿಧಿವಿಜ್ಞಾನ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







