ಗುಜರಾತ್ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ: 19 ಹೊಸ ಮುಖಗಳಿಗೆ ಸಚಿವ ಸ್ಥಾನ; ಹರ್ಷ್ ಸಾಂಘ್ವಿ ಡಿಸಿಎಂ

ಹರ್ಷ್ ಸಾಂಘ್ವಿ (Photo credit: indiatoday.in)
ಗಾಂಧಿನಗರ: ಶುಕ್ರವಾರ ಗುಜರಾತ್ ಸಚಿವ ಸಂಪುಟದ 25 ಮಂದಿ ಸದಸ್ಯರ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ರಾಜ್ಯ ಗೃಹ ಸಚಿವರಾಗಿದ್ದ ಹರ್ಷ್ ಸಾಂಘ್ವಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕ್ರಿಕೆಟಿಗ ರವೀಂದ್ರ ಜಡೇಜಾರ ಪತ್ನಿ ರಿವಾಬಾ ಜಡೇಜಾ ಕೂಡಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗಾಂಧಿನಗರದ ರಾಜಭವನದಲ್ಲಿ ಆಯೋಜಿಸಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವ್ ವ್ರತ್ ಸಮ್ಮುಖದಲ್ಲಿ ಹರ್ಷ್ ಸಾಂಘ್ವಿ ಉಪ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. 2022ರಲ್ಲಿ ನಡೆದಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎದುರಾಳಿ ಆಪ್ ಅಭ್ಯರ್ಥಿ ವಿರುದ್ಧ ಹರ್ಷ್ ಸಾಂಘ್ವಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಭೂಪೇಂದ್ರ ಪಟೇಲ್ ರ ನೂತನ ಸಚಿವ ಸಂಪುಟದಲ್ಲಿ ಹಲವು ಚಿರಪರಿಚಿತ ಮುಖಗಳೂ ಇದ್ದು, ರಿಷಿಕೇಶ್ ಪಟೇಲ್, ಕನುಭಾಲ್ ದೇಸಾಯಿ, ಕುನ್ವರ್ ಜಿ ಬವಾಲಿಯಾ, ಪ್ರಫುಲ್ ಪನ್ಸೇರಿಯಾ, ಪರ್ಷೋತ್ತಮ್ ಸೋಳಂಕಿ ಹಾಗೂ ಹರ್ಷ್ ಸಾಂಘ್ವಿ ಸೇರಿದಂತೆ ಒಟ್ಟು ಆರು ಸಚಿವರು ಸಂಪುಟಕ್ಕೆ ಮರಳಿದ್ದಾರೆ.
ಈ ಪೈಕಿ ರಿಷಿಕೇಶ್ ಪಟೇಲ್, ಕನುಭಾಯಿ ದೇಸಾಯಿ, ಕುನ್ವರ್ ಜಿ ಬವಾಲಿಯಾ ಹಾಗೂ ಪರ್ಷೋತ್ತಮ್ ಸೋಳಂಕಿ ಸೇರಿದಂತೆ ನಾಲ್ವರು ಸಚಿವರು ತಮ್ಮ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಅವರ ಖಾತೆಗಳಲ್ಲಿ ಯಾವುದೇ ಬದಲಾವಣೆಯಾಗದೆ ಇರುವುದರಿಂದ, ಅವರು ಪ್ರಮಾಣ ವಚನ ಸ್ವೀಕರಿಸಲಿಲ್ಲ.
ಉಳಿದಂತೆ, ತ್ರಿಕಮ್ ಛಾಂಗ್, ಸ್ವರೂಪ್ ಜಿ ಠಾಕೋರ್, ಪ್ರವೀಣ್ ಮಾಲಿ, ಪಿ.ಸಿ.ಬರಂಡ, ದರ್ಶನ ವಘೇಲಾ, ಕಾಂತಿಲಾಲ್ ಅಮೃತಿಯ, ಅರ್ಜುನ್ ಮೊಧ್ವಾಪಡಿಯಾ, ಪ್ರದ್ಯುಮ್ನ್ ವಾಜ, ಕೌಶಿಕ್ ವೆಕಾರಿಯಾ, ಜಿತೇಂದ್ರಭಾಯಿ ವಘಾನಿ, ರಮಣ್ ಭಾಯಿ ಸೋಳಂಕಿ, ಕಮಲೇಶ್ ಭಾಯಿ ಪಟೇಲ್, ಸಂಜಯ್ ಸಿಂಗ್ ಮಹಿಡ, ರಮೇಶ್ ಭಾಯಿ ಕಟಾರ, ಪ್ರಫುಲ್ ಪನ್ಸೇರಿಯಾ, ಮನಿಶಾ ವಕೀಲ್, ಈಶ್ವರ್ ಸಿನ್ಹ್ ಪಟೇಲ್, ಡಾ. ಜಯರಾಮ್ ಭಾಯಿ ಗಮಿತ್, ನರೇಶ್ ಭಾಯಿ ಪಟೇಲ್ ಸೇರಿದಂತೆ ಒಟ್ಟು 19 ಹೊಸ ಮುಖಗಳು ಭೂಪೇಂದ್ರ ಪಟೇಲ್ ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.







