Gujarat | ಕೈಕೋಳ ಹಾಕಿದ್ದ ಆರೋಪಿಗಳ ಮೇಲೆ ಹಲ್ಲೆ: ಸೂರತ್ DCP ವರ್ಗಾವಣೆಗೆ ಹೈಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ
ಅಹಮದಾಬಾದ್, ಆ. 14: ಸೂರತ್ ನಲ್ಲಿ ಕೈಕೋಳ ಹಾಕಿದ್ದ ಆರೋಪಿಗಳನ್ನು ಪೊಲೀಸರು ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸಿದ ವೇಳೆ, ಅವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಹೇಳಿರುವ ನ್ಯಾಯಾಲಯ, ಘಟನೆಯಲ್ಲಿ ಆರೋಪ ಎದುರಿಸುತ್ತಿರುವ ಸೂರತ್ ಉಪ ಪೊಲೀಸ್ ಆಯುಕ್ತರನ್ನು (DCP) ತಕ್ಷಣವೇ ವರ್ಗಾಯಿಸುವಂತೆ ಶುಕ್ರವಾರ ಆದೇಶಿಸಿದೆ.
ಜುಲೈ 14ರಂದು ನಡೆದ ಈ ಘಟನೆಯ ಕುರಿತು ವಕೀಲ ಉತ್ಕರ್ಷ್ ದವೆ ಅವರು ಲಿಖಿತ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು.
ಕೈಕೋಳ ಹಾಕಿದ್ದ ಆರೋಪಿಗಳನ್ನು ಉಪ ಪೊಲೀಸ್ ಆಯುಕ್ತ ಮತ್ತು ಇತರ ಪೊಲೀಸ್ ಸಿಬ್ಬಂದಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಸಂದರ್ಭದಲ್ಲಿ ಆರೋಪಿಗಳ ಮೇಲೆ ಪದೇ ಪದೇ ಹಲ್ಲೆ ನಡೆಸಿರುವುದೂ ವೀಡಿಯೋ ದೃಶ್ಯಾವಳಿಗಳಲ್ಲಿ ದಾಖಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಘಟನೆಯನ್ನು ಪೊಲೀಸ್ ಮಹಾ ನಿರ್ದೇಶಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದ ಕುರಿತು ಸಹಾಯಕ ಪೊಲೀಸ್ ಆಯುಕ್ತ(ಅಪರಾಧ)ರಿಂದ ಪ್ರಾಥಮಿಕ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ವೀಡಿಯೋದಲ್ಲಿ ಗುರುತಿಸಲಾಗಿರುವ ಎಲ್ಲರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ ಎಂದರು.
ಇದನ್ನು ಆಲಿಸಿದ ನ್ಯಾಯಾಲಯ, ಘಟನೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಹುದ್ದೆಯಲ್ಲೇ ಮುಂದುವರಿದರೆ, ಅವರ ವಿರುದ್ಧದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿತು. ಇದೇ ಕಾರಣಕ್ಕೆ ಸಂಬಂಧಿತ DCP ಅವರನ್ನು ವರ್ಗಾಯಿಸುವಂತೆ ಆದೇಶಿಸಿತು.
ಈ ಘಟನೆ ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದು, ಅದಕ್ಕೆ ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ. ಅಲ್ಲದೆ, ಘಟನೆಯ ವೀಡಿಯೋಗಳು ಕೂಡ ವೈರಲ್ ಆಗಿದೆ. ಹೀಗಾಗಿ, ಈ ಆರೋಪಗಳು ಅತ್ಯಂತ ಗಂಭೀರವಾಗಿವೆ ಎಂದು ನ್ಯಾಯಾಲಯ ಹೇಳಿತು.
ಪೊಲೀಸರು ಆರೋಪಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವ ಅಥವಾ ಹಿಂಸಿಸುವ ರೀತಿಯ ವರ್ತನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈ ಹಿಂದೆ ಎರಡು ಆದೇಶಗಳನ್ನು ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಮೇ 7ರಂದು ಸುತ್ತೋಲೆ ಹೊರಡಿಸಿತ್ತು. ಆ ಸುತ್ತೋಲೆಯನ್ನೂ ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಸುತ್ತೋಲೆಯ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳನ್ನು ಭಸ್ಕಿ ಹೊಡೆಯುವಂತೆ ಮಾಡುವುದು, ಮೊಣಕಾಲಿನ ಮೇಲೆ ತೆವಳುವಂತೆ ಮಾಡುವುದು, ಒದೆಯುವುದು, ದೊಣ್ಣೆಯಿಂದ ಹೊಡೆಯುವುದು, ಕಿವಿ ಹಿಡಿದುಕೊಂಡು ಅಥವಾ ಕೈಮುಗಿದು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡುವುದು, ಕುಕ್ಕರಗಾಲಿನಲ್ಲಿ ನಿಲ್ಲುವಂತೆ ಬಲವಂತಪಡಿಸುವುದು ಹಾಗೂ ತನಿಖೆಯ ವೇಳೆ ಕೈಕೋಳ ಹಾಕಿದ್ದ ಆರೋಪಿಗಳನ್ನು ಹಗ್ಗದಿಂದ ಕಟ್ಟಿ ಹಾಕುವುದು ನಿಷಿದ್ಧವಾಗಿದೆ ಎಂದು ಅಮಿಕಸ್ ಕ್ಯೂರಿ ನ್ಯಾಯಾಲಯಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿತು.






