2.28 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಕಳೆದುಕೊಂಡ ಗುಜರಾತ್!

ಸಾಂದರ್ಭಿಕ ಚಿತ್ರ (PTI)
ಅಹಮದಾಬಾದ್: ಗುಜರಾತ್ ನಲ್ಲಿ ಕಳೆದ ಐದು ವರ್ಷಗಳಲ್ಲಿ 2.28 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಕಡಿಮೆಯಾಗಿದೆ. 2020–21ರಲ್ಲಿ 124.62 ಲಕ್ಷ ಹೆಕ್ಟೇರ್ ಇದ್ದ ವ್ಯವಸಾಯ ಯೋಗ್ಯ ಭೂಮಿಯ ಪ್ರಮಾಣ 2024–25ರಲ್ಲಿ 122.34 ಲಕ್ಷ ಹೆಕ್ಟೇರ್ ಗೆ ಇಳಿಕೆಯಾಗಿದೆ. ಇದು ಶೇ. 1.83ರಷ್ಟು ಕುಸಿತವಾಗಿದೆ.
ಇದೇ ವೇಳೆ, ಗುಜರಾತ್ ನ ವ್ಯವಸಾಯ ಅವಲಂಬಿತ ಕುಟುಂಬಗಳ ಮಾಸಿಕ ಸರಾಸರಿ ಆದಾಯ ರೂ. 12,631 ಇದೆ. ಇದು ದೇಶದ ಮಾಸಿಕ ಸರಾಸರಿ ಆದಾಯ ರೂ. 10,218ಕ್ಕಿಂತ ಶೇ. 23.6ರಷ್ಟು ಹೆಚ್ಚು. ಆದರೆ ಮೇಘಾಲಯ, ಹರ್ಯಾಣ, ಪಂಜಾಬ್, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಿಝೋರಾಂ, ಕೇರಳ, ಉತ್ತರಾಖಂಡ ಹಾಗೂ ಕರ್ನಾಟಕಕ್ಕೆ ಹೋಲಿಸಿದರೆ ಗುಜರಾತ್ ನ ರೈತ ಕುಟುಂಬಗಳ ಆದಾಯ ಕಡಿಮೆ ಇದೆ. ಈ ಆದಾಯವು 2018–19ರ ಮಟ್ಟಕ್ಕೆ ಕುಸಿದಿರುವುದನ್ನೂ ದತ್ತಾಂಶಗಳು ಸೂಚಿಸಿವೆ.
ಲೋಕಸಭೆಗೆ ನೀಡಲಾದ ಭೂ ಬಳಕೆ ಅಂಕಿ–ಅಂಶಗಳ ಪ್ರಕಾರ, 2020–21ರಲ್ಲಿ ಗುಜರಾತ್ ನಲ್ಲಿ 12,462 ಸಾವಿರ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಇತ್ತು. 2021–22ರಲ್ಲಿ ಇದು 12,482 ಸಾವಿರ ಹೆಕ್ಟೇರ್ಗೆ ಸ್ವಲ್ಪ ಏರಿಕೆಯಾಗಿತ್ತು.
ಆದರೆ ನಂತರದ ಮೂರು ವರ್ಷಗಳಲ್ಲಿ ಭೂಮಿಯ ಪ್ರಮಾಣ ನಿರಂತರವಾಗಿ ಕಡಿಮೆಯಾಗಿದೆ. 2022–23ರಲ್ಲಿ 12,368 ಸಾವಿರ ಹೆಕ್ಟೇರ್, 2023–24ರಲ್ಲಿ 12,317 ಸಾವಿರ ಹೆಕ್ಟೇರ್ ಹಾಗೂ 2024–25ರಲ್ಲಿ 12,234 ಸಾವಿರ ಹೆಕ್ಟೇರ್ಗೆ ಇಳಿಕೆಯಾಗಿದೆ.
ಹೀಗಾಗಿ, 2020–21ರಲ್ಲಿ ಇದ್ದ 12,462 ಸಾವಿರ ಹೆಕ್ಟೇರ್ಗೆ ಹೋಲಿಸಿದರೆ 2024–25ರಲ್ಲಿ 228 ಸಾವಿರ ಹೆಕ್ಟೇರ್ ಭೂಮಿ ಕಡಿಮೆಯಾಗಿದೆ. ಅಂದರೆ, ಐದು ವರ್ಷಗಳಲ್ಲಿ ಗುಜರಾತ್ 2.28 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿಯನ್ನು ಕಳೆದುಕೊಂಡಿದೆ.
►ದೇಶದಲ್ಲೂ ಇಳಿಕೆ
ಗುಜರಾತ್ ನಂತೆ ದೇಶದ ಒಟ್ಟು ವ್ಯವಸಾಯ ಯೋಗ್ಯ ಭೂಮಿಯ ಪ್ರಮಾಣದಲ್ಲೂ ಇಳಿಕೆಯಾಗಿದೆ. 2020–21ರಲ್ಲಿ ದೇಶದಲ್ಲಿ 1,802.66 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಇತ್ತು. 2024–25ರಲ್ಲಿ ಅದು 1,794.28 ಲಕ್ಷ ಹೆಕ್ಟೇರ್ ಗೆ ಇಳಿಕೆಯಾಗಿದೆ.
2024–25ರಲ್ಲಿ ದೇಶದ ಒಟ್ಟು ವ್ಯವಸಾಯ ಯೋಗ್ಯ ಭೂಮಿಯಲ್ಲಿ ಗುಜರಾತ್ ನ ಪಾಲು ಶೇ. 6.82ರಷ್ಟಿದೆ.
ಭೂಮಿ ಕಡಿಮೆಯಾಗಿದ್ದರೂ, ವ್ಯವಸಾಯ ಯೋಗ್ಯ ಭೂಮಿಯ ಪ್ರಮಾಣದಲ್ಲಿ ಗುಜರಾತ್ ದೇಶದ ಪ್ರಮುಖ ರಾಜ್ಯಗಳಲ್ಲಿ ಮುಂದುವರಿದಿದೆ. 2024–25ರಲ್ಲಿ 122.34 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿಯೊಂದಿಗೆ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಂತರ ಗುಜರಾತ್ ದೇಶದಲ್ಲಿ ಏಳನೇ ಸ್ಥಾನದಲ್ಲಿದೆ.
ರಾಜ್ಯವು ದೊಡ್ಡ ಪ್ರಮಾಣದ ಹಾಗೂ ಆರ್ಥಿಕವಾಗಿ ಮಹತ್ವದ ಕೃಷಿ ನೆಲೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ವ್ಯವಸಾಯ ಯೋಗ್ಯ ಭೂಮಿಯ ಶೇ. 1.83ರಷ್ಟು ಇಳಿಕೆ ಗಮನಾರ್ಹವಾಗಿದೆ.
ಸೌಜನ್ಯ: newindianexpress.com






