ಗುಜರಾತ್ ವಿಮಾನ ದುರಂತ: 9300 ಗಂಟೆ ವಿಮಾನ ಚಾಲನೆ ಅನುಭವ ಹೊಂದಿದ್ದ ಪೈಲಟ್ ಗಳು!

ಕ್ಯಾಪ್ಟನ್ ಸುಮೀತ್ ಸಬರ್ವಾಲ್ / ಕ್ಲೈವ್ ಕುಂದರ್
ಅಹ್ಮದಾಬಾದ್: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ದುರಂತಕ್ಕೀಡಾಗಿ 241 ಮಂದಿಯ ಜೀವ ಬಲಿ ಪಡೆದ ಎಐ 171 ವಿಮಾನವನ್ನು ಚಾಲನೆ ಮಾಡುತ್ತಿದ್ದ ಕ್ಯಾಪ್ಟನ್ ಸುಮೀತ್ ಸಬರ್ವಾಲ್, ವಿಮಾನ ಟೇಕಾಫ್ ಆಗುವ ಮುನ್ನ ಮನೆಗೆ ಕರೆ ಮಾಡಿ, ಲಂಡನ್ ತಲುಪಿದ ಬಳಿಕ ಮತ್ತೆ ಮಾತನಾಡುವುದಾಗಿ ಹೇಳಿದ್ದರು. ಆದರೆ ಅದು ಸಾಧ್ಯವೇ ಆಗಲಿಲ್ಲ. ಚಾಲನೆ ಮಾಡುತ್ತಿದ್ದ ವಿಮಾನ ದುರಂತಕ್ಕೀಡಾಗಿ ಭಸ್ಮವಾಗುವ ಮುನ್ನ ಅವರ ಕೊನೆಯ ಕರೆ ಏರ್ ಟ್ರಾಫಿಕ್ ಕಂಟ್ರೋಲ್ಗೆ!
ಹಿರಿಯ ಪೈಲಟ್ ಆಗಿದ್ದ ಸಬರ್ವಾಲ್ 8200 ಗಂಟೆ ವಿಮಾನ ಚಲಾಯಿಸಿದ ಅನುಭವ ಹೊಂದಿರುವವರು ಎಂದು ಡಿಜಿಸಿಎ ಹೇಳಿದೆ. ಆದರೆ ಅವರ ಹಿರಿಯ ಸಹೋದ್ಯೋಗಿಯೊಬ್ಬರ ಪ್ರಕಾರ, ಅದಕ್ಕಿಂತಲೂ ಹೆಚ್ಚಿನ ಅನುಭವವನ್ನು ಸಬರ್ವಾಲ್ ಹೊಂದಿದ್ದರು. "ವಿಮಾನಯಾನ ನಿಯಂತ್ರಣ ಸಂಸ್ಥೆಯ ಜಿಜಿಸಿಎ ಪ್ಲಾಟ್ಫಾರಂ ಹೊಸದು ಹಾಗೂ ಎಲ್ಲ ದಾಖಲೆಗಳನ್ನು ಹೊಂದಿರುವ ಸಾಧ್ಯತೆ ಇಲ್ಲ" ಎಂದು ಅವರು ಹೇಳುತ್ತಾರೆ.
"ಆತ ಅತ್ಯುತ್ತಮ; ಸದ್ದಿಲ್ಲದೇ ಕೆಲಸ ಮಾಡುವ ಪೈಲಟ್; ಏರ್ಬಸ್ ಎ310, ಬೋಯಿಂಗ್ 777 ಮತ್ತು ಬಿ787ನಂಥ ವಿಮಾನಗಳನ್ನು ಚಲಾಯಿಸಿದ ಅನುಭವ ಹೊಂದಿರುವವರು. ತಲೆ ತಗ್ಗಿಸಿಕೊಂಡು ಕೆಲಸ ಮಾಡುತ್ತಿದ್ದ ಪ್ರೀತಿಪಾತ್ರ ಸಹೋದ್ಯೋಗಿ" ಎಂದು ಅವರು ಬಣ್ಣಿಸುತ್ತಾರೆ.
ಸಹ ಪೈಲಟ್ ಕ್ಲೈವ್ ಕುಂದರ್ 1100 ಗಂಟೆಗಳ ಹಾರಾಟ ಅನುಭವ ಹೊಂದಿರುವವರು. ವಾಣಿಜ್ಯ ವಿಮಾನಗಳ ಕಮಾಂಡಿಂಗ್ ಹುದ್ದೆಗೆ ಕನಿಷ್ಠ 1500 ಗಂಟೆಗಳ ಅನುಭವ ಅಗತ್ಯ. ಸುಮಾರು 10 ಗಂಟೆಗಳ ಯಾನಕ್ಕೆ ಕುಂದರ್ ಮೊದಲ ಫ್ಲೈಯಿಂಗ್ ಆಫೀಸರ್ ಆಗಿ, ಸಬರ್ವಾಲ್ಗೆ ನೆರವಾಗುತ್ತಿದ್ದರು.
ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ನಟ ವಿಕ್ರಾಂತ್ ಮಿಸ್ರಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ, "ನನ್ನ ಅಂಕಲ್ ಕ್ಲಿಫರ್ಡ್ ಕುಂದರ್ ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ ಎನ್ನುವುದು ಹೆಚ್ಚಿನ ನೋವಿನ ಸಂಗತಿ.." ಎಂದಿದ್ದಾರೆ. ಹಲವು ಮಂದಿ ಜಾಲತಾಣಿಗರು ಕುಂದರ್ ಅವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದು, ಅವರು ಮಂಗಳೂರು ಮೂಲದವರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.







