ಪಂಜಾಬ್ ಮೂಲದ ಮ್ಯಾಡ್ ಸಂಧು ಹತ್ಯೆ ಪ್ರಕರಣ: ಗುಜರಾತ್ ಪೊಲೀಸರಿಂದ ಆರೋಪಿಯ ಬಂಧನ

ಮ್ಯಾಡ್ ಸಂಧು , ಆರೋಪಿ ಪರ್ಮಿಂದರ್ ಪ್ರಸಾದ್ | Photo Credit : NDTV
ಅಹ್ಮದಾಬಾದ್: ಪಂಜಾಬ್ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅನುಯಾಯಿಗಳನ್ನು ಹೊಂದಿದ್ದ ಮತ್ತು ಪ್ರಸಾದನ ಕಲಾವಿದರಾಗಿದ್ದ ಮ್ಯಾಡ್ ಸಂಧು ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಆರೋಪಿ ಪರ್ಮಿಂದರ್ ಪ್ರಸಾದ್ ಆಲಿಯಸ್ ಪರ್ಮಿಂದರ್ ಕಾಕಾನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಮ್ಯಾಡ್ ಸಂಧುವನ್ನು ಹತ್ಯೆಗೈದ ನಂತರ ಪರ್ಮಿಂದರ್ ಪಂಜಾಬ್ನಿಂದ ಪರಾರಿಯಾಗಿದ್ದು, ಖಚಿತ ಮಾಹಿತಿಯಿಂದ ಅಹ್ಮದಾಬಾದ್ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಧುಸೂದನ್ ಸಂಧು 2026 ಅಕ್ಟೋಬರ್ 3ರಂದು ಸಂಜೆ 6 ಗಂಟೆ ಸುಮಾರಿಗೆ ಅಮೃತಸರದ ಲೋಹಾರ್ಕಾ ರಸ್ತೆಯಲ್ಲಿ ತಮ್ಮ ಕಾರನ್ನು ಪಡೆಯಲು ಹೋದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.
ಮೋಟಾರು ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಧು ಅವರ ಮೇಲೆ ಎರಡರಿಂದ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಸಂಧು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮಾರ್ಗ ಮಧ್ಯೆ ಮೃತಪಟ್ಟಿದ್ದರು.
ಈ ಹತ್ಯೆಯ ನಂತರ ‘ಗೋಲ್ಡಿ ಧಿಲ್ಲೋನ್’ ಎಂಬ ಫೇಸ್ಬುಕ್ ಪುಟ ಈ ಹತ್ಯೆಯ ಹೊಣೆ ಹೊತ್ತುಕೊಂಡಿತು.
ಅಮೃತಸರದ ಕಾಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು. ಹತ್ಯೆಯ ನಂತರ ಇಬ್ಬರು ಆರೋಪಿಗಳು ಭೂಗತರಾಗಿದ್ದಾರೆ ಎಂದು ವರದಿಯಾಗಿತ್ತು.
ತನಿಖೆಯ ವೇಳೆ ಒಬ್ಬ ಆರೋಪಿ ಗುಜರಾತ್ ತಲುಪಿದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅಹ್ಮದಾಬಾದ್ ಕ್ರೈಮ್ ಬ್ರಾಂಚ್ ತಾಂತ್ರಿಕ ಕಣ್ಗಾವಲು ಮತ್ತು ತನ್ನ ಮಾಹಿತಿ ಜಾಲ ಬಳಸಿ ನಗರದ ವಾಡಜ್ ಪ್ರದೇಶದಲ್ಲಿದ್ದ ಪರ್ಮಿಂದರ್ನನ್ನು ಪತ್ತೆ ಹಚ್ಚಿ, ಬಂಧಿಸಿತು.






