Gujarat | ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ; ಮೂವರ ಸ್ಥಿತಿ ಗಂಭೀರ

Photo Credit: ANI
ಭಾವ್ನಗರ್ (ಗುಜರಾತ್): ಜಿಲ್ಲೆಯಲ್ಲಿ ಕಳ್ಳಭಟ್ಟಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಶುಕ್ರವಾರ ಮಧ್ಯರಾತ್ರಿ ಹಾರ್ದಿಕ್ ಕಿಲ್ಜಿ ಎಂಬವರು ಮೃತಪಟ್ಟಿದ್ದಾರೆ. ಸದ್ಯ 17 ಮಂದಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಆರು ಮಂದಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಈವರೆಗೆ 17 ಮಂದಿ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮೆಥನಾಲ್ ನ ವಿಷಪೂರಿತ ಪ್ರಮಾಣ ಹೊಂದಿದ್ದ ಕಳ್ಳಭಟ್ಟಿ ಮದ್ಯವನ್ನು ಸಂತ್ರಸ್ತರು ಸೇವಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ತಯಾರಾಗುವ ಜನಪ್ರಿಯ ವಿದೇಶಿ ಮದ್ಯದ ಬ್ರ್ಯಾಂಡ್ ನ ಬಾಟಲಿಗಳಲ್ಲಿ ಕಳ್ಳಭಟ್ಟಿ ಮದ್ಯವನ್ನು ತುಂಬಿ ಮಾರಾಟ ಮಾಡಲಾಗಿತ್ತು. ಸಂತ್ರಸ್ತರು ಇದೇ ಮದ್ಯವನ್ನು ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯದ ಮಾದರಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಶೇ 38.59ರಷ್ಟು ಮೆಥನಾಲ್ ಹಾಗೂ ಶೇ 0.94ರಷ್ಟು ಎಥನಾಲ್ ಇರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದಲ್ಲಿ ಹೆಸರಿಸಲಾಗಿರುವ 21 ಮಂದಿಯ ಪೈಕಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸ್ ಇಲಾಖೆಯ ರಾಜ್ಯ ಮೇಲ್ವಿಚಾರಣಾ ಘಟಕಕ್ಕೆ ವಹಿಸಲಾಗಿದೆ.
ಗುಜರಾತ್ನಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಮದ್ಯ ತಯಾರಿಕೆ, ಮಾರಾಟ ಹಾಗೂ ಸೇವನೆ ನಿಷಿದ್ಧವಾಗಿದೆ.






