"ನನಗೆ ಮನೆಗೆ ಮರಳಬೇಕು": ಪ್ರಧಾನಿ ಮೋದಿಯವರಿಂದ ನೆರವು ಯಾಚಿಸಿದ ಉಕ್ರೇನ್ ಸೆರೆಯಲ್ಲಿರುವ ಗುಜರಾತ್ ವಿದ್ಯಾರ್ಥಿ

ಹೊಸದಿಲ್ಲಿ: ರಶ್ಯ ಪರವಾಗಿ ಯುದ್ಧದಲ್ಲಿ ಭಾಗಿಯಾದ ಆರೋಪದಲ್ಲಿ ಉಕ್ರೇನ್ ಸೇನೆಯಿಂದ ಸೆರೆ ಹಿಡಿಯಲ್ಪಟ್ಟಿರುವ 23 ವರ್ಷದ ಗುಜರಾತ್‌ನ ಮೊರ್ಬಿ ಜಿಲ್ಲೆಯ ಯುವಕನೊಬ್ಬ, ತನ್ನನ್ನು ಬಿಡುಗಡೆಗೊಳಿಸಲು ನೆರವು ನೀಡುವಂತೆ ಭಾರತ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾನೆ.
ತನ್ನ ಕುಟುಂಬಕ್ಕೆ ವಿಡಿಯೊ ಸಂದೇಶ ರವಾನಿಸಿರುವ ಉಕ್ರೇನ್ ಸೇನೆಯ ಸೆರೆಯಲ್ಲಿರುವ ಸಾಹಿಲ್ ಮುಹಮ್ಮದ್ ಹುಸೈನ್ ಮಜೋತಿ ಎಂಬ ಯುವಕ, ರಶ್ಯಕ್ಕೆ ವ್ಯಾಸಂಗ ಮಾಡಲು ಅಥವಾ ಉದ್ಯೋಗಕ್ಕಾಗಿ ಆಗಮಿಸುವ ಯೋಜನೆ ಇರುವವರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾನೆ.
"ಸದ್ಯ ನಾನು ಯುದ್ಧಾಪರಾಧಿಯಾಗಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದೇನೆ. ನನಗೀಗ ಯಾವುದೇ ಭರವಸೆ ಉಳಿದಿಲ್ಲ ಹಾಗೂ ಮುಂದೇನಾಗುತ್ತದೋ ತಿಳಿದಿಲ್ಲ. ರಶ್ಯಕ್ಕೆ ವ್ಯಾಸಂಗ ಮಾಡಲು ಅಥವಾ ಉದ್ಯೋಗಕ್ಕಾಗಿ ಬರುವವರು ಎಚ್ಚರಿಕೆಯಿಂದ ಇರಬೇಕು. ಇಲ್ಲಿ ಬಹಳಷ್ಟು ವಂಚಕರಿದ್ದಾರೆ. ನೀವಿಲ್ಲಿ ಕ್ರಿಮಿನಲ್, ಮಾದಕ ದ್ರವ್ಯ ಅಥವಾ ಕಾನೂನುಬಾಹಿರ ಪ್ರಕರಣಗಳಲ್ಲಿ ಸಿಲುಕಿಕೊಳ್ಳಬಹುದು. ಎಷ್ಟು ಸಾಧ್ಯವೋ ಅಷ್ಟು ಇವೆಲ್ಲದರಿಂದ ದೂರ ಉಳಿಯಿರಿ" ಎಂದು ತನ್ನ ಕುಟುಂಬದ ಸದಸ್ಯರಿಗೆ ರವಾನಿಸಿರುವ ಎರಡು ವಿಡಿಯೊ ಸಂದೇಶದಲ್ಲಿ ಸಾಹಿಲ್ ಮುಹಮ್ಮದ್ ಹುಸೈನ್ ಕಿವಿಮಾತು ಹೇಳಿದ್ದಾನೆ.
"ನನಗೆ ಸಹಾಯ ಮಾಡುವಂತೆ ಭಾರತ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡುತ್ತೇನೆ" ಎಂದೂ ಆತ ಈ ವಿಡಿಯೊ ಸಂದೇಶದಲ್ಲಿ ಹೇಳಿದ್ದಾನೆ. ಈ ವಿಡಿಯೊ ಸಂದೇಶಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಇವೆ.
ರಶ್ಯನ್ ಭಾಷೆ ಮತ್ತು ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಲು ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಐಟಿಎಂಒ ವಿಶ್ವವಿದ್ಯಾಲಯಕ್ಕೆ ಮಜೋತಿ ಪ್ರಯಾಣ ಬೆಳೆಸಿದ್ದನು. ಆದರೆ, ಬಳಿಕ ಆತ ರಶ್ಯದಲ್ಲಿ ಕಾನೂನಾತ್ಮಕ ಸಮಸ್ಯೆಗೆ ಸಿಲುಕಿಕೊಂಡಿದ್ದ. ಆತ ಉಕ್ರೇನ್ ಸೇನೆಯಿಂದ ಸೆರೆಯಾಗುವುದಕ್ಕೂ ಮುನ್ನ, ಆತನನ್ನು ರಶ್ಯ ಸೇನೆ ಬಲವಂತವಾಗಿ ತನ್ನ ಸೇನೆಗೆ ಸೇರ್ಪಡೆ ಮಾಡಿಕೊಂಡಿತ್ತು.







