Gujarat | S I R ವೇಳೆ ಮತ ಪಟ್ಟಿಯಲ್ಲಿ ಹೆಸರಿಗೆ BJP ಕಾರ್ಪೊರೇಟರ್ ಆಕ್ಷೇಪಿಸಿದ್ದ, ಡೋಲಕ್ ವಾದಕ ಮೀರ್ ಹಾಜಿ ಕಸಮ್ ರಿಗೆ ಪದ್ಮಶ್ರೀ ಗೌರವ!

ಹಾಜಿ ಕಸಮ್ | Photo Credit : indianexpress.com
ಹೊಸದಿಲ್ಲಿ: ಗುಜರಾತ್ ಮತಪಟ್ಟಿಯಲ್ಲಿ ಡೋಲಕ್ ವಾದಕ ಮೀರ್ ಹಾಜಿ ಕಸಮ್ ಅವರ ಹೆಸರಿಗೆ ಬಿಜೆಪಿ ನಾಯಕ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವಿವಾದ ಭುಗಿಲೆದ್ದ ಬೆನ್ನಲ್ಲೇ, ಗಣರಾಜ್ಯೋತ್ಸವದ ಹಿಂದಿನ ದಿನ ಪ್ರಕಟಗೊಂಡ ಪದ್ಮಶ್ರೀ ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ.
74 ವರ್ಷದ ಡೋಲಕ್ ವಾದಕ ಮೀರ್ ಹಾಜಿಭಾಯಿ ಕಸಮ್ಭಾಯಿ ಅವರು ಹಾಜಿ ರಾಮಕ್ಡು ಹಾಗೂ ಹಾಜಿ ರಾಥೋಡ್ ಎಂದೇ ಖ್ಯಾತರಾಗಿದ್ದಾರೆ.
ಇದಕ್ಕೂ ಮುನ್ನ, ಹಾಜಿ ರಾಥೋಡ್ ಹಾಗೂ ಅವರ ಕುಟುಂಬವು ಜುನಾಗಢ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೈರಾಗಿದೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದೆ ಎಂದು ಆಕ್ಷೇಪಿಸಿ, ಜನವರಿ 13ರಂದು ಜುನಾಗಢ ನಗರ ಪಾಲಿಕೆ ಕಾರ್ಪೊರೇಟರ್ ಸಂಜಯ್ ಮನ್ವಾರ, ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಡಿ ಫಾರಂ–7 ಅನ್ನು ಸಲ್ಲಿಸಿದ್ದರು.
ಮಂಗಳವಾರ ಜುನಾಗಢದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಜುನಾಗಢ ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಲಲಿತ್ ಪನ್ಸಾರ, ಮನ್ವಾರ ಸಲ್ಲಿಸಿರುವ ಫಾರಂ–7 ಅನ್ನು ಪ್ರದರ್ಶಿಸಿದ್ದರು ಹಾಗೂ ಬಿಜೆಪಿ ನಾಯಕನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಕಾಂಗ್ರೆಸ್ ಪಕ್ಷದ ವಕ್ತಾರ ಮನೀಶ್ ದೋಶಿ ಈ ಫಾರಂನ ಚಿತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
“ಹಾಜಿ ರಾಮಕ್ಡು ಜುನಾಗಢದಲ್ಲಿ ಪ್ರತಿಭಾವಂತ ಡೋಲಕ್ ವಾದಕರಾಗಿ ಖ್ಯಾತ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ಎರಡು ದಿನಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿ ಗೌರವಿಸಿದೆ. ಅವರು ಜುನಾಗಢ, ಗುಜರಾತ್ ಹಾಗೂ ಭಾರತದ ಹೆಮ್ಮೆಯಾಗಿದ್ದಾರೆ. ಅವರು ದೇಶ ಹಾಗೂ ವಿದೇಶಗಳಲ್ಲಿ 3,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. 2022ರಲ್ಲಿ ಅವರಿಗೆ ‘ಗುಜರಾತ್ ಗರಿಮಾ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಹಾಜಿಭಾಯಿ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರಾದ ಇಕ್ಬಾಲ್ ರಾಥೋಡ್, ಎಜಾಝ್, ರಶೀದಾಬೆನ್ ಹಾಗೂ ಹನೀಫ್ಭಾಯಿ ಅವರ ಹೆಸರುಗಳಿಗೆ ಬಿಜೆಪಿ ಕಾರ್ಪೊರೇಟರ್ ಮನ್ವಾರ ಆಕ್ಷೇಪ ವ್ಯಕ್ತಪಡಿಸಿ ಫಾರಂ–7 ಸಲ್ಲಿಸಿರುವುದು ಖಂಡನೀಯ. ಈ ಕೃತ್ಯದ ಮೂಲಕ ಜುನಾಗಢ ಹಾಗೂ ನಮ್ಮ ದೇಶದ ಹೆಮ್ಮೆಗೆ ಮಸಿ ಬಳಿದ ಬಿಜೆಪಿ ಕಾರ್ಪೊರೇಟರ್ ವಿರುದ್ಧ ಕಟ್ಟುನಿಟ್ಟಿನ ಶಾಸನಾತ್ಮಕ ಕ್ರಮ ಜರುಗಿಸಬೇಕು. ಬಿಜೆಪಿ ಕಾರ್ಪೊರೇಟರ್ಗಳು ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡಿದ್ದು, ಜುನಾಗಢ ನಗರ ಪಾಲಿಕೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಡಿ ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸಗಟಾಗಿ ಸಾವಿರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು The Indian Express ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ 74 ವರ್ಷದ ಹಾಜಿಭಾಯಿ ಕಸಮ್ಭಾಯಿ, “ಇಂತಹ ಘಟನೆಯಿಂದ ನನ್ನ ಹೃದಯ ಒಡೆದುಹೋಗಿದೆ. ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿ ತುಣುಕುಗಳ ಮೂಲಕ ಮಂಗಳವಾರ ನನಗೆ ಈ ವಿಷಯ ತಿಳಿಯಿತು. ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಹಾಗೂ ನನ್ನ ಕುಟುಂಬದ ಸದಸ್ಯರ ಹೆಸರು ಸೇರಿಸಲು ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಬಳಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಹಾಗೂ ಪಾಸ್ಪೋರ್ಟ್ಗಳು ಸೇರಿದಂತೆ ಎಲ್ಲ ಪ್ರಮುಖ ದಾಖಲೆಗಳೂ ಇವೆ. ಸಂಬಂಧಿತ ಪ್ರಾಧಿಕಾರಗಳು ಸೂಚಿಸಿದಾಗ ನಮ್ಮ ಎಲ್ಲ ದಾಖಲೆಗಳನ್ನು ತೋರಿಸಲು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
ಇದೇ ವೇಳೆ, “ಭಾರತ ಸರ್ಕಾರ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದರಿಂದ ರೋಮಾಂಚಿತನಾಗಿದ್ದೇನೆ. ನನ್ನ ಸಂತೋಷವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳೇ ಇಲ್ಲ. ನನ್ನ ಉಪನಾಮ ‘ರಾಥೋಡ್’ ಆಗಿದ್ದು, ಉಪಜಾತಿಯ ಹೆಸರು ‘ಮೀರ್’ ಎಂದೂ ಹೇಳಲು ಬಯಸುತ್ತೇನೆ” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.







