ವಿಚ್ಛೇದನ ಸಂದರ್ಭದಲ್ಲಿ ಖಿನ್ನತೆ; ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದೆ ಎಂದ ಕ್ರಿಕೆಟಿಗ ಯಜುವೇಂದ್ರ ಚಾಹಲ್!

PC | Raj Shamani
ಹೊಸದಿಲ್ಲಿ: ತಮ್ಮ ಪತ್ನಿ ಧರ್ಮಶ್ರೀ ವರ್ಮಾರೊಂದಿಗಿನ ವಿಚ್ಛೇದನದ ಕುರಿತು ಕೊನೆಗೂ ಮೌನ ಮುರಿದಿರುವ ಭಾರತೀಯ ಸ್ಪಿನ್ನರ್ ಯಜುವೇಂದ್ರ ಚಾಹಲ್, ನಾವಿಬ್ಬರೂ ವಿಚ್ಛೇದನಗೊಂಡ ಸಂದರ್ಭದಲ್ಲಿ ಖಿನ್ನತೆಗೊಳಗಾಗಿ, ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದೆ ಎಂದು ಬಹಿರಂಗಗೊಳಿಸಿದ್ದಾರೆ.
ಐದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಯಜುವೇಂದ್ರ ಚಾಹಲ್ ಹಾಗೂ ಧರ್ಮಶ್ರೀ ವರ್ಮ ದಂಪತಿಗಳಿಗೆ ಮಾರ್ಚ್ 20ರಂದು ಬಾಂಬೆ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು. ತಮ್ಮಿಬ್ಬರ ನಡುವಿನ ಸಂಬಂಧದ ಕುರಿತು ಮಾತನಾಡಿರುವ ಯಜುವೇಂದ್ರ ಚಾಹಲ್, ನಮ್ಮ ದಾಂಪತ್ಯ ಜೀವನದ ಕೊನೆಯ ಕೆಲ ತಿಂಗಳು ನನ್ನಲ್ಲಿ ಆತ್ಮಹತ್ಯೆಯ ಯೋಚನೆ ಮೂಡಿಸಿದ್ದವು ಎಂದು ಹೇಳಿಕೊಂಡಿದ್ದಾರೆ.
ರಾಜ್ ಶಮಾನಿ ಪಾಡ್ ಕಾಸ್ಟ್ ನೊಂದಿಗೆ ಮಾತನಾಡಿರುವ ಅವರು, “ಈ ವೇಳೆ ಗಾಬರಿಯಾಗಿತ್ತು. ಹೀಗಾಗಿ ಡಿಸೆಂಬರ್-ಜನವರಿ (2024-5) ತಿಂಗಳ ನಡುವೆ ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಕ್ರೀಡಾಕೂಟದ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ತಂಡದಿಂದ ವಿಶ್ರಾಂತಿ ಪಡೆಯುವಂತೆ ನನಗೆ ಸೂಚಿಸಲಾಗಿತ್ತು” ಎಂದು ಸ್ಮರಿಸಿದ್ದಾರೆ.
“ನಾನು ಖಿನ್ನತೆಗೊಳಗಾಗಿದ್ದೆ. ನನ್ನಲ್ಲಿ ಆತ್ಮಹತ್ಯೆಯ ಯೋಚನೆಗಳು ಸುಳಿಯುತ್ತಿದ್ದವು. ನಾನು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಕುರಿತು ಸಾಕಷ್ಟು ವಿಷಯಗಳನ್ನು ನೋಡುತ್ತಿದ್ದೆ. ಹೀಗಾಗಿ ನಾನು ಕ್ರಿಕೆಟ್ ನಿಂದ ಒಂದು ವಿಶ್ರಾಂತಿ ಪಡೆಯಲು ಬಯಸಿದೆ. ನಾನು ಗಾಬರಿಯಿಂದ ಬೆವರಲು ಪ್ರಾರಂಭಿಸಿದ್ದೆ. ಎಸಿ ಹಾಕಿದ್ದರೂ, ನಾನು ಬೆವರುತ್ತಿದ್ದೆ” ಎಂದು ತಮ್ಮ ಅನುಭವಗಳನ್ನು ಅವರು ಈ ಪಾಡ್ ಕಾಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ, ತಮ್ಮ ವಿವಾಹ ಮುರಿದು ಬೀಳಲು ಕಾರಣವಾದ ಅಂಶಗಳ ಕುರಿತೂ ಅವರು ಬಹಿರಂಗಪಡಿಸಿದ್ದಾರೆ. ನಾವು ವಿಚ್ಛೇದನದ ಹಂತ ತಲುಪುವ ಹೊತ್ತಿಗೆ ನಮ್ಮಲ್ಲಿ ಸೌಹಾರ್ದ ಬಾಂಧವ್ಯವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ನಾವಿಬ್ಬರೂ ವಿಭಿನ್ನ ನಿರೀಕ್ಷೆಗಳಿಂದ ದಾಂಪತ್ಯ ಸಂಬಂಧಕ್ಕೆ ಒಳಗಾಗಿದ್ದೆವು. ಆದರೆ, ನನ್ನ ಕ್ರಿಕೆಟ್ ಜೀವನದಿಂದಾಗಿ ನಾನು ನನ್ನ ಪತ್ನಿಗೆ ಸಾಕಷ್ಟು ಸಮಯ ಮೀಸಲಿಸಲು ಸಾಧ್ಯವಾಗದೆ ಹೋಗಿದ್ದರಿಂದ ನಮ್ಮ ದಾಂಪತ್ಯ ಜೀವನ ಬಿರುಕು ಬಿಟ್ಟಿತು ಎಂದು ಅವರು ತಿಳಿಸಿದ್ದಾರೆ.







