ಹಲ್ದ್ವಾನಿ ‘ಶುದ್ಧೀಕರಣ’ ವಿವಾದ | ‘ದಲಿತರ ಮೇಲಿನ ತಾರತಮ್ಯ ಇನ್ನೂ ಮುಂದುವರಿದಿರುವುದು ಕಳವಳಕಾರಿ’: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

Photo: screengrab/x.com/officeofchirag
ಪಾಟ್ನಾ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿ ನಡೆದ ಸ್ಥಳದಲ್ಲಿ ನಡೆದ ‘ಶುದ್ಧೀಕರಣ’ ಆಚರಣೆ ಕುರಿತು ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷ (LJP)ದ ನಾಯಕ ಚಿರಾಗ್ ಪಾಸ್ವಾನ್ ಶನಿವಾರ ಕಳವಳ ವ್ಯಕ್ತಪಡಿಸಿದರು.
“ದಲಿತರು ಇಂದಿಗೂ ಎದುರಿಸುತ್ತಿರುವ ತಾರತಮ್ಯ’ದ ಬಗ್ಗೆ ಕಾಂಗ್ರೆಸ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ತಾರತಮ್ಯವನ್ನು ತಡೆಯಲು ಕಾಂಗ್ರೆಸ್ ಏನು ಮಾಡಿದೆ" ಎಂದೂ ಪ್ರಶ್ನಿಸಿದರು.
‘ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಲಿತರು ಇಂದಿಗೂ ಎದುರಿಸುತ್ತಿರುವ ತಾರತಮ್ಯದ ಹಲವು ಉದಾಹರಣೆಗಳನ್ನು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಪರಿಸ್ಥಿತಿ ಬದಲಾಗದೆ ಇದ್ದರೆ, ಅದು ಖಂಡಿತವಾಗಿಯೂ ನಮ್ಮ ಸರ್ಕಾರಕ್ಕೂ ಕಳವಳಕಾರಿ ವಿಷಯ. ಅದಕ್ಕಾಗಿಯೇ ವಿವಿಧ ವಿಷಯಗಳ ಬಗ್ಗೆ ನಾವು ನಮ್ಮ ನಿಲುವನ್ನು ದೃಢವಾಗಿ ವ್ಯಕ್ತಪಡಿಸುತ್ತೇವೆ’ ಎಂದು ಬಿಜೆಪಿಯ ಮಿತ್ರಪಕ್ಷವಾಗಿರುವ LJP ನಾಯಕ ಪಾಸ್ವಾನ್ ಮಾಧ್ಯಮಗಳಿಗೆ ತಿಳಿಸಿದರು.
‘ಇಂದು ಕಳವಳ ವ್ಯಕ್ತಪಡಿಸುತ್ತಿರುವವರು ಸ್ವಾತಂತ್ರ್ಯದ ನಂತರ ದೀರ್ಘಕಾಲ ದೇಶಕ್ಕೆ ಸಾಕಷ್ಟು ಅವಕಾಶ ಪಡೆದವರು. ಸಮಾಜದಲ್ಲಿ ತಾರತಮ್ಯ ಮುಂದುವರಿದಿದೆ ಎಂದು ಅವರು ಈಗ ಹೇಗೆ ಹೇಳಿಕೊಳ್ಳುತ್ತಾರೆ?’ ಎಂದು ಪ್ರಶ್ನಿಸಿದರು.
‘ಇದರ ಹೊರತಾಗಿಯೂ ಸಮಾಜದಲ್ಲಿ ತಾರತಮ್ಯ ಮುಂದುವರಿದಿದ್ದರೆ, ಸಮಾಜದ ಅಡಿಪಾಯವನ್ನು ಪರಿಣಾಮಕಾರಿಯಾಗಿ ಬಲಪಡಿಸುವಲ್ಲಿ ಅವರೂ ವಿಫಲರಾಗಿದ್ದಾರೆ ಎಂಬುದನ್ನು ಅದು ಸೂಚಿಸುತ್ತದೆ’ ಎಂದರು.
ಮೀಸಲಾತಿ: ‘ಆರ್ಥಿಕ ದೃಷ್ಟಿಕೋನ ಸರಿಯಲ್ಲ’
ಮೀಸಲಾತಿಯ ಆಧಾರ ಸಾಮಾಜಿಕ ತಾರತಮ್ಯವಾಗಿರುವುದರಿಂದ, ಅದನ್ನು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಚರ್ಚಿಸುವುದು ಸರಿಯಲ್ಲ ಎಂದು ಪಾಸ್ವಾನ್ ಹೇಳಿದರು.
“ಮೀಸಲಾತಿಯ ಆಧಾರ ಸಾಮಾಜಿಕ ಅಂಶಗಳು ಮತ್ತು ತಾರತಮ್ಯದಲ್ಲಿ ಇರುವುದರಿಂದ, ಆರ್ಥಿಕ ದೃಷ್ಟಿಕೋನದಿಂದ ಅದನ್ನು ಚರ್ಚಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂಬುದು ನಮ್ಮ ಸ್ಪಷ್ಟ ನಿಲುವು” ಎಂದರು.
ಪರಿಶಿಷ್ಟ ಜಾತಿಗಳ (ಎಸ್ಸಿ) ಉಪವರ್ಗೀಕರಣದ ವಿಚಾರದಲ್ಲಿ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿ ನೀಡುವ ಕುರಿತು ಕೆಲವು ದಲಿತ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿ ಮಿತ್ರಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (HAM)ದ ಬಿಹಾರ ಸಚಿವ ಸಂತೋಷ್ ಕುಮಾರ್ ಸುಮನ್ ಇತ್ತೀಚೆಗೆ ಈ ವಿಚಾರ ಪ್ರಸ್ತಾಪಿಸಿದ್ದರು. ಅವರ ತಂದೆ ಜಿತನ್ ರಾಮ್ ಮಾಂಝಿ ಕೇಂದ್ರ ಸಚಿವರಾಗಿದ್ದಾರೆ.
ಮೀಸಲಾತಿಯ ಸಾಂವಿಧಾನಿಕ ಆಧಾರದಲ್ಲಿ ಬದಲಾವಣೆ ಬಯಸುವವರು ಸಂಸತ್ತಿನಲ್ಲಿ ಅಂತಹ ಪ್ರಸ್ತಾವನೆ ತರಲಿ ಎಂದು ಪಾಸ್ವಾನ್ ಸವಾಲು ಹಾಕಿದರು.
“ಎಲ್ಲರೂ ಲೋಕಸಭೆಗೆ ಬಂದು ಅದನ್ನು ಮಾಡಲಿ” ಎಂದರು.
ಜಾತಿ ಆಧಾರಿತ ಮೀಸಲಾತಿ ಕೋಟಾಗಳ ವಿರುದ್ಧ ಹೊಸದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲೂ ಈ ವಿಚಾರ ಗಮನ ಸೆಳೆದಿತ್ತು.
ಚಿರಾಗ್ ಪಾಸ್ವಾನ್ ಹೆಚ್ಚಿನ ಕೋಟಾ ಪ್ರಯೋಜನ ಪಡೆದಿರುವ ಜಾತಿಗೆ ಸೇರಿದವರು ಎಂದು ಮಾಂಝಿ ಹೇಳಿದ್ದಾರೆ. ಆದರೆ ಪರಿಶಿಷ್ಟ ಜಾತಿಗಳಲ್ಲಿನ ಇತರ ಸಮುದಾಯಗಳು ಇನ್ನೂ ಹಿಂದುಳಿದಿವೆ ಎಂಬುದು ಅವರ ವಾದ.
ಹಲ್ದ್ವಾನಿಯಲ್ಲಿ ವಿವಾದಕ್ಕೆ ಕಾರಣವಾದ ‘ಶುದ್ಧೀಕರಣ’
ಉತ್ತರಾಖಂಡದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿ ನಡೆದಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು.
ರ್ಯಾಲಿ ಬಳಿಕ ಬಲಪಂಥೀಯ ಗುಂಪಿನ ಸದಸ್ಯರು ಸ್ಥಳದಲ್ಲಿ ‘ಶುದ್ಧೀಕರಣ’ ಆಚರಣೆ ನಡೆಸಿದ್ದರು. ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ರಾಹುಲ್ ಗಾಂಧಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಶುದ್ಧೀಕರಣ’ವು “ಅಸ್ಪೃಶ್ಯತೆಗೆ ಮತ್ತೊಂದು ಹೆಸರು” ಎಂದು ಅವರು ಹೇಳಿದ್ದರು.
“ಬಿಜೆಪಿ ಮತ್ತು RSS ಸದಸ್ಯರು ಮಾತ್ರ ಇದನ್ನು ಮಾಡುತ್ತಾರೆ ಮತ್ತು ಇದು ಅಪರಾಧ. ಭಾರತದ ಸಂವಿಧಾನದ ಅಡಿಯಲ್ಲಿ ಇದು ಅಪರಾಧ, ಕ್ರಿಮಿನಲ್ ಚಟುವಟಿಕೆ. ‘ಶುದ್ಧೀಕರಣ’ ವಾಸ್ತವವಾಗಿ ಅಸ್ಪೃಶ್ಯತೆಗೆ ಮತ್ತೊಂದು ಹೆಸರು. ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದ್ದರೂ ಬಿಜೆಪಿ ಸದಸ್ಯರು ಅದನ್ನು ಬಹಿರಂಗವಾಗಿ ಆಚರಿಸುತ್ತಾರೆ” ಎಂದು ರಾಹುಲ್ ಹೇಳಿದ್ದರು.
‘ಶುದ್ಧೀಕರಣ’ದ ಮೂಲಕ ದಲಿತರನ್ನು ಮುಟ್ಟಬಾರದು ಮತ್ತು ದಲಿತರು ಅಶುದ್ಧರು ಎಂಬ ಸಂದೇಶ ನೀಡಲಾಗುತ್ತಿದೆ. ಇದು ಸಂವಿಧಾನದ ಅಡಿಯಲ್ಲಿ ಅಪರಾಧ ಎಂದೂ ಅವರು ಆರೋಪಿಸಿದ್ದರು.
ಖರ್ಗೆ ಕೂಡ ಈ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು. ದಲಿತ ನಾಯಕನಾಗಿರುವ ತಮ್ಮ ಗುರುತಿನ ಕಾರಣಕ್ಕಾಗಿಯೇ ರ್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಆಚರಣೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದರು. ಆಚರಣೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಸ್ಪೃಶ್ಯತೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ, ‘ಶುದ್ಧೀಕರಣ’ ಆಚರಣೆಯಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ಹೇಳಿದ್ದಾರೆ.
ಕಾಂಗ್ರೆಸ್ ರ್ಯಾಲಿಯಲ್ಲಿ “ನಿರ್ದಿಷ್ಟ ಧರ್ಮದ ಜನರು” ಘೋಷಣೆಗಳನ್ನು ಕೂಗಿದ್ದರು. ಇದಕ್ಕೆ ಪ್ರತಿಯಾಗಿ ಕೆಲವು ಧಾರ್ಮಿಕ ಸಂಘಟನೆಗಳು ಸ್ಥಳದಲ್ಲಿ ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.






