ಹಲ್ದ್ವಾನಿ ಹಿಂಸಾಚಾರ ಪ್ರಕರಣ : ಪ್ರಮುಖ ಆರೋಪಿ ಮಲಿಕ್ ಬಂಧನ

ಅಬ್ದುಲ್ ಮಲಿಕ್ | Photo: indiatodayne.in
ಹೊಸದಿಲ್ಲಿ : ಹಲ್ದವಾನಿ ಹಿಂಸಾಚಾರ ಪ್ರಕರಣದ ಸೂತ್ರಧಾರಿ ಎಂದು ಆರೋಪಿಸಲಾದ ಅಬ್ದುಲ್ ಮಲಿಕ್ ನನ್ನು ಉತ್ತರಾಖಂಡ ಪೊಲೀಸರು ಶನಿವಾರ ದಿಲ್ಲಿಯಲ್ಲಿ ಬಂಧಿಸಿದ್ದಾರೆ. ಹಲ್ದವಾನಿಯಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಆತ ತಲೆಮರೆಸಿ ಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ಮಲಿಕ್ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಿಮಿನಲ್ ಸಂಚು, ಮೃತ ವ್ಯಕ್ತಿಯ ಹೆಸರನ್ನು ಬಳಸಿಕೊಂಡು ಅಕ್ರಮವಾಗಿ ನಿವೇಶನ ಖರೀದಿ, ಕಟ್ಟಡ ನಿರ್ಮಾಣ ಹಾಗೂ ಭೂವರ್ಗಾವಣೆ ಮಾಡಿದ ಆರೋಪಗಳನ್ನು ಹೊರಿಸಲಾಗಿದೆಯೆಂದು ನೈನಿತಾಲ್ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಪ್ರಹ್ಲಾದ್ ನಾರಾಯಣ್ ಮೀನಾ ತಿಳಿಸಿದ್ದಾರೆ.
ಹಲ್ದವಾನಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಮಲಿಕ್ ಹಾಗೂ ಆತನ ಪುತ್ರ ಅಬ್ದುಲ್ ಮೊದ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು ಹಾಗೂ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿತ್ತು. ಮೂರು ಮಂದಿಯ ವಿರುದ್ಧ ಎಫ್ಐಆರ್ ಗಳನ್ನು ದಾಖಲಿಸಲಾಗಿತ್ತು.
ಹಲ್ದವಾನಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಬ್ದುಲ್ ಮಲಿಕ್, ಆತನ ಪತ್ನಿ ಸೇರಿದಂತೆ ಆರು ಮಂದಿಯ ವಿರುದ್ಧ ಗುರುವಾರ ಹೊಸದಾಗಿ ವಂಚನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪವನ್ನು ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರ ಬಂಧನದೊಂದಿಗೆ ಫೆಬ್ರವರಿ 8ರಂದು ಉತ್ತರಾಖಂಡದ ಹಲ್ದವಾನಿಯಲ್ಲಿ ಭುಗಿಲೆದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 78ಕ್ಕೇರಿದೆ. ಭಾನ್ಬೂಲ್ಪುರದಲ್ಲಿ ಅಕ್ರಮವಾಗಿ ನಿರ್ಮಾಣವಾಗಿತ್ತೆನ್ನಲಾದ ಮದ್ರಸಾ ಕಟ್ಟಡದ ನೆಲಸಮಗೊಳಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.







