ಅಕ್ರಮ ವಲಸಿಗರಿಗೆ ಕೈಕೋಳ ಹಾಕುವುದು ಅಮೆರಿಕದ ನೀತಿ: ಸಂಸತ್ತಿನಲ್ಲಿ ಗಡೀಪಾರು ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡ ಜೈಶಂಕರ್

ಎಸ್.ಜೈಶಂಕರ್ | PC : PTI
ಹೊಸದಿಲ್ಲಿ: ಅಕ್ರಮ ವಲಸಿಗರನ್ನು ಕೈಕೋಳ ಹಾಕಿ ಗಡೀಪಾರು ಮಾಡುವ ಪದ್ಧತಿಯು 2009ರಿಂದ ಅಮೆರಿಕದಲ್ಲಿ ಜಾರಿಯಲ್ಲಿರುವ ನೀತಿಯ ಭಾಗವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡಿಪಾರು ಆದೇಶದ ಬಳಿಕ 13 ಮಕ್ಕಳು ಸೇರಿದಂತೆ 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಬುಧವಾರ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.
ಭಾರತೀಯರನ್ನು ಗಡೀಪಾರು ಮಾಡುವಾಗ ಕೈಕೋಳ ಹಾಕಿರುವ ಫೋಟೊಗಳು ವೈರಲ್ ಆಗಿರುವ ಹಿನ್ನೆಲೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿತ್ತು. ಪ್ರಿಯಾಂಕ ಗಾಂಧಿ ಸೇರಿದಂತೆ ಪ್ರತಿಪಕ್ಷದ ಸಂಸದರು ಅಮೆರಿಕದಲ್ಲಿ ಭಾರತೀಯರನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ʼಟ್ರಂಪ್ ಮತ್ತು ಪ್ರಧಾನಿ ಮೋದಿ ಸ್ನೇಹಿತರು ಎಂದು ಹೇಳಲಾಗುತ್ತಿತ್ತು. ಅವರು ಇದಕ್ಕೆ ಏಕೆ ಅವಕಾಶ ನೀಡಿದರು? ಅವರನ್ನು ಮರಳಿ ಕರೆತರಲು ನಾವು ನಮ್ಮದೇ ಆದ ವಿಮಾನವನ್ನು ಕಳುಹಿಸಲು ಸಾಧ್ಯವಾಗಲಿಲ್ಲವೇ? ಮನುಷ್ಯರನ್ನು ಹೀಗೆ ನಡೆಸಿಕೊಳ್ಳಬೇಕೇ? ಕೈಕೋಳ, ಸಂಕೋಲೆ ಹಾಕಿ ಹಿಂದಕ್ಕೆ ಕಳುಹಿಸಬೇಕೇ? ವಿದೇಶಾಂಗ ಸಚಿವರು ಮತ್ತು ಪ್ರಧಾನಿ ಈ ಬಗ್ಗೆ ಉತ್ತರಿಸಬೇಕುʼ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದರು.





