ನಮ್ಮ ಕೈಗಳಿಗೆ ಕೈಕೋಳ, ಕಾಲುಗಳಿಗೆ ಸರಪಳಿ ಹಾಕಲಾಗಿತ್ತು: ಅಮೆರಿಕದ 2ನೇ ಮಿಲಿಟರಿ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಭಾರತೀಯನಿಂದ ಆರೋಪ

Photo | PTI
ಹೊಸದಿಲ್ಲಿ : ನಮ್ಮ ಕಾಲುಗಳಿಗೆ ಸರಪಳಿ ಮತ್ತು ಕೈಗಳಿಗೆ ಕೈಕೋಳ ಹಾಕಲಾಗಿತ್ತು ಎಂದು ಅಮೆರಿಕದಿಂದ ಗಡಿಪಾರದ ಅಕ್ರಮ ವಲಸಿಗನೋರ್ವ ಹೇಳಿಕೊಂಡಿದ್ದಾರೆ.
ಅಮೆರಿಕದಲ್ಲಿ ಅಕ್ರಮ ವಲಸಿಗರಾಗಿದ್ದ ಭಾರತೀಯರನ್ನು ಗಡಿಪಾರು ಮಾಡುವಾಗ ಕೈಕೋಳಗಳನ್ನು ಹಾಕಿ ಕೈದಿಗಳಂತೆ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಈ ಮೊದಲು ಕೇಳಿ ಬಂದಿತ್ತು. ಇದೀಗ ಮತ್ತೆ ಅದೇ ರೀತಿಯ ಆರೋಪ ಕೇಳಿ ಬಂದಿದೆ.
ಅಮೆರಿಕದಿಂದ ಗಡಿಪಾರಾದ 116 ಮಂದಿಯನ್ನು ಕರೆತಂದ ಅಮೆರಿಕದ ವಿಶೇಷ ವಿಮಾನ ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಕುರಾಲಾ ಕಲಾನ್ ಗ್ರಾಮದ ದಲ್ಜಿತ್ ಸಿಂಗ್ ಅವರು ಅಮರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ಭಾರತೀಯ ವಲಸಿಗರ ತಂಡದಲ್ಲಿದ್ದರು. ದಲ್ಜಿತ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಯಾಣದ ಸಮಯದಲ್ಲಿ ನಮ್ಮ ಕೈಗಳಿಗೆ ಕೈಕೋಳ ಮತ್ತು ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ಬಾರಿ ಗಡಿಪಾರುಗೊಂಡಿರುವ 119 ಮಂದಿಯ ಪೈಕಿ 67 ಮಂದಿ ಪಂಜಾಬಿನವರು ಹಾಗೂ 33 ಮಂದಿ ಹರ್ಯಾಣದವರು, ಗುಜರಾತ್ ನ ಎಂಟು ಮಂದಿ, ಉತ್ತರ ಪ್ರದೇಶದ ಮೂವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಜಮ್ಮು & ಕಾಶ್ಮೀರದ ತಲಾ ಓರ್ವರು ಸೇರಿದ್ದಾರೆ.