ʼನೀವು ಚೇತರಿಸಿಕೊಳ್ಳುತ್ತಿರುವುದು ಸಂತೋಷʼ: ಕಾನ್‌ಸ್ಟೇಬಲ್ ಮೃತಪಟ್ಟು 42 ದಿನಗಳ ನಂತರ ಆಯುಷ್ಮಾನ್ ಭಾರತ್ ಸಂದೇಶ!

ರಾಯ್ಪುರ: ಛತ್ತೀಸ್‌ಗಢದಲ್ಲಿ 42 ದಿನಗಳ ಹಿಂದೆ ಮೃತಪಟ್ಟಿದ್ದ ಪೊಲೀಸ್ ಕಾನ್ಸ್ಟೇಬಲ್‌ವೊಬ್ಬರ ಮೊಬೈಲ್‌ಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ವ್ಯವಸ್ಥೆಯಲ್ಲಿ “ಚೇತರಿಸಿಕೊಳ್ಳುತ್ತಿರುವುದು ಸಂತೋಷʼ ಎಂಬ ಸಂದೇಶ ಬಂದಿರುವುದು ಕುಟುಂಬಸ್ಥರಲ್ಲಿ ಅಚ್ಚರಿ ಮೂಡಿಸಿರುವುದಲ್ಲದೆ ಚರ್ಚೆಗೆ ಗ್ರಾಸವಾಗಿದೆ.
ದೇವ್ ನಾರಾಯಣ್ ರಾಮ್ ಎಂಬ ಕಾನ್ಸ್ಟೇಬಲ್ ಮೃತಪಟ್ಟ ಬಳಿಕ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು ಮತ್ತು ಮರಣ ಪ್ರಮಾಣಪತ್ರವನ್ನೂ ಪಡೆಯಲಾಗಿತ್ತು. ಆದರೆ, ಪತಿಯ ಸಾವಿನ ದುಃಖದಲ್ಲಿದ್ದ ಅವರ ಪತ್ನಿ ಸೀಮಾ ಕುಜೂರ್ ಅವರಿಗೆ ಪತಿಯ ಮೊಬೈಲ್‌ಗೆ ಬಂದ ವಾಟ್ಸಾಪ್ ಸಂದೇಶವೊಂದು ಅಚ್ಚರಿ ಮೂಡಿಸಿದೆ.
ಸಂದೇಶದಲ್ಲೇನಿತ್ತು?
“ಪ್ರಿಯ ದೇವ್ ನಾರಾಯಣ್ ರಾಮ್, ನೀವು ಚೇತರಿಸಿಕೊಂಡು ಮನೆಗೆ ತೆರಳುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಆರೋಗ್ಯ ಸೇವೆಗಳಿಂದ ನೀವು ತೃಪ್ತರಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ” ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು.
ಈ ಸಂದೇಶ ಹೇಗೆ ಬಂದಿತು ಎಂಬುದನ್ನು ಪ್ರಶ್ನಿಸಿರುವ ಸೀಮಾ ಕುಜೂರ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಕಾನ್ಸ್ಟೆಬಲ್ ದೇವ್ ನಾರಾಯಣ್ ರಾಮ್, ಜೂನ್ 26 ರಂದು ಸುರ್ಗುಜಾದ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನಗಳ ನಂತರ ಜೂನ್ 30 ರಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದರು. ಕಾನ್ಸ್ಟೆಬಲ್ ಮೃತಪಟ್ಟ 42 ದಿನಗಳ ಬಳಿಕ ಬಂದ ಈ ಸಂದೇಶವು ರೋಗಿಗಳ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲಾಗುತ್ತಿದೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಲ್ಲದೆ ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯಗಳನ್ನು ಅಕ್ರಮವಾಗಿ ಪಡೆಯಲಾಗುತ್ತಿದೆಯಾ ಎಂಬ ಅನುಮಾನಕ್ಕೂ ಕಾರಣವಾಗಿದೆ.
"ನನ್ನ ಪತಿ ಅಂಬಿಕಾಪುರ ವೈದ್ಯಕೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ನಾವು ಅವರ ಅಂತ್ಯಕ್ರಿಯೆಯನ್ನು ಮಾಡಿದ್ದೇವೆ ಮತ್ತು ಈಗ, 42 ದಿನಗಳ ನಂತರ, ಅವರು ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದಾರೆ ಎಂದು ನಮಗೆ ಸಂದೇಶಗಳು ಬರುತ್ತಿವೆ. ಅಂತಹ ದೊಡ್ಡ ತಾಂತ್ರಿಕ ದೋಷ ಹೇಗೆ ಸಂಭವಿಸಬಹುದು? ಈ ಬಗ್ಗೆ ತನಿಖೆಯಾಗಬೇಕು” ಎಂದು ಸೀಮಾ ಕುಜೂರ್ ಆಗ್ರಹಿಸಿದ್ದಾರೆ.
ತಾನು ಕೂಡ ಆಸ್ಪತ್ರೆಯ ಉದ್ಯೋಗಿಯಾಗಿದ್ದು, ರೋಗಿಗಳ ದಾಖಲೆಗಳನ್ನು ನಿಖರವಾಗಿ ನಿರ್ವಹಿಸುವ ಮಹತ್ವ ತಿಳಿದಿದೆ. ಹೀಗಿರುವಾಗ ಇಂತಹ ಘಟನೆ ನಡೆದಿರುವುದು ಮತ್ತಷ್ಟು ಆತಂಕ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
‘ನನಗೆ ಇಂತಹ ಘಟನೆ ಸಂಭವಿಸಿದರೆ, ಸಾಮಾನ್ಯ ಜನರು ಮತ್ತು ಬಡ ಬುಡಕಟ್ಟು ಸಮುದಾಯದವರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಬಹುದು’ ಎಂದು ಸೀಮಾ ಹೇಳಿದ್ದಾರೆ.
ಆಸ್ಪತ್ರೆ ಹೇಳಿದ್ದೇನು?
ನಾರಾಯಣ್ ಮೃತಪಟ್ಟ ಬಳಿಕ ಅವರ ಚಿಕಿತ್ಸೆಗೆಂದು ಯಾವುದೇ ಹಣವನ್ನು ಪಡೆದಿಲ್ಲ. ರೋಗಿಯ ದಾಖಲೆಗಳನ್ನು ಮುಚ್ಚುವಲ್ಲಿ ಡೇಟಾ ಎಂಟ್ರಿ ಆಪರೇಟರ್‌ನಿಂದ ಉಂಟಾದ ವಿಳಂಬದಿಂದ ಈ ಸಮಸ್ಯೆ ಸಂಭವಿಸಿದೆ ಎಂದು ಅಂಬಿಕಾಪುರ ವೈದ್ಯಕೀಯ ಆಸ್ಪತ್ರೆ ತಿಳಿಸಿದೆ.
ಅಂಬಿಕಾಪುರ ಮೆಡಿಕಲ್ ಆಸ್ಪತ್ರೆಯ ಡಾ. ಶೈಲೇಂದ್ರ ಗುಪ್ತಾ ಈ ಬಗ್ಗೆ ಪ್ರತಿಕ್ರಿಯಿಸಿ ದೇವ್ ನಾರಾಯಣ್ ಅವರು ಆಸ್ಪತ್ರೆಗೆ ದಾಖಲಾಗಿ ಆಯುಷ್ಮಾನ್ ಕಾರ್ಡ್ ಯೋಜನೆಯಡಿ ಚಿಕಿತ್ಸೆ ಪಡೆದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ 42 ದಿನಗಳ ಕಾಲ ಆಯುಷ್ಮಾನ್ ಕಾರ್ಡ್ ಬಳಕೆಯಾಗಿದೆ ಎಂಬ ಕುಟುಂಬದ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ದೇವ್ ನಾರಾಯಣ್ ಜೂನ್ 26ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 30ರಂದು ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಚಿಕಿತ್ಸೆಗೆ ಸಂಬಂಧಿಸಿದ ಮೊತ್ತವನ್ನು ಮಾತ್ರ ಆಯುಷ್ಮಾನ್ ಯೋಜನೆಯಡಿ ಕಡಿತ ಮಾಡಲಾಗಿದೆ. ಅವರ ನಿಧನದ ಬಳಿಕ ಯಾವುದೇ ಹೆಚ್ಚುವರಿ ಮೊತ್ತವನ್ನು ಕಡಿತ ಮಾಡಿಲ್ಲ ಎಂದು ಶೈಲೇಂದ್ರ ಗುಪ್ತಾ ಹೇಳಿದ್ದಾರೆ.






