'ಪೆಂಗ್ವಿನ್' ಹಿಂದೆ ಸರಿದ ಬಳಿಕ ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಿಸಲು ಮುಂದಾದ 'HarperCollins'

Photo | indiatoday
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆಯನ್ನು ಹಾರ್ಪರ್ಕಾಲಿನ್ಸ್ ಇಂಡಿಯಾ ಪ್ರಕಟಿಸಲಿದೆ ಎಂದು ಪ್ರಕಾಶಕರು ಶುಕ್ರವಾರ ತಿಳಿಸಿದ್ದಾರೆ.
‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಹೆಸರಿನ ಆತ್ಮಕಥೆ ನವೆಂಬರ್ 10ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಯುದ್ಧಾನಂತರದ ಇಟಲಿಯಲ್ಲಿ ಸೋನಿಯಾ ಅವರ ಬಾಲ್ಯ, ಭಾರತದಲ್ಲಿನ ಜೀವನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ ಹಾಗೂ ಭಾರತೀಯ ರಾಜಕೀಯದ ಕೇಂದ್ರಬಿಂದುವಾಗಿದ್ದ ಅವರ ಹಲವು ದಶಕಗಳ ಪಯಣವನ್ನು ಕೃತಿ ಒಳಗೊಂಡಿದೆ.
ಈ ಕೃತಿ ‘ನಮ್ಮ ಕಾಲದ ಅತ್ಯಂತ ನಿರೀಕ್ಷಿತ ರಾಜಕೀಯ ಆತ್ಮಕಥೆಗಳಲ್ಲಿ ಒಂದು’ ಎಂದು ಹಾರ್ಪರ್ಕಾಲಿನ್ಸ್ ಹೇಳಿದೆ. ‘ಭಾರತದ ಪಯಣದ ಕುರಿತು ಅಪರೂಪದ ಆಂತರಿಕ ದೃಷ್ಟಿಕೋನ’ವನ್ನು ಪುಸ್ತಕ ನೀಡಲಿದೆ ಎಂದೂ ಪ್ರಕಾಶಕರು ತಿಳಿಸಿದ್ದಾರೆ.
ಪೆಂಗ್ವಿನ್ ಇಂಡಿಯಾ ಭಾರತದಲ್ಲಿ ಕೃತಿಯನ್ನು ಪ್ರಕಟಿಸದಿರಲು ನಿರ್ಧರಿಸಿದ ಬಳಿಕ ವಿವಾದ ಆರಂಭವಾಗಿತ್ತು. ಹಸ್ತಪ್ರತಿಯ ಕೆಲವು ಭಾಗಗಳಲ್ಲಿ ಸಂಪಾದಕೀಯ ಬದಲಾವಣೆಗಳನ್ನು ಮಾಡುವಂತೆ ಮತ್ತು ಕೆಲವು ಅಂಶಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಕೋರಿತ್ತು ಎಂದು ವರದಿಗಳು ತಿಳಿಸಿದ್ದವು. ಆದರೆ, ಸೋನಿಯಾ ಗಾಂಧಿ ಅವರ ತಂಡ ಇದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ.
ಪೆಂಗ್ವಿನ್ ರಾಂಡಮ್ ಹೌಸ್ ನ ಮುದ್ರಣ ಸಂಸ್ಥೆಯಾಗಿರುವ ಅಮೆರಿಕದ ಆಲ್ಫ್ರೆಡ್ ಎ. ನಾಫ್, ನವೆಂಬರ್ 10ರಂದು ಕೃತಿಯನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿದ ನಂತರ ಭಾರತದಲ್ಲಿ ಇದರ ಪ್ರಕಟಣೆ ಕುರಿತು ವಿವಾದ ಎದ್ದಿತ್ತು. ಬಳಿಕ ಪೆಂಗ್ವಿನ್ ಇಂಡಿಯಾ, ಭಾರತದಲ್ಲಿ ಕೃತಿಯ ಪ್ರಕಾಶಕರು ತಾವಲ್ಲ ಎಂದು ಸ್ಪಷ್ಟಪಡಿಸಿತ್ತು.
ಕಾಂಗ್ರೆಸ್ ಆರೋಪ
ಪ್ರಧಾನಿ ನರೇಂದ್ರ ಮೋದಿ, RSS ಹಾಗೂ ಭಾರತ–ಚೀನಾ ಸಂಬಂಧಗಳಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಪ್ರಯತ್ನಿಸಿತ್ತು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಪೆಂಗ್ವಿನ್ ಇಂಡಿಯಾದ ನಿರ್ಧಾರದ ಹಿಂದೆ ಬಾಹ್ಯ ಒತ್ತಡವಿದೆ ಎಂದೂ ಅವರು ದೂರಿದ್ದರು.
ಆದರೆ, ಕೃತಿಯನ್ನು ಪ್ರಕಟಿಸದಿರಲು ತೆಗೆದುಕೊಂಡ ನಿರ್ಧಾರದ ಹಿಂದೆ ಯಾವುದೇ ಬಾಹ್ಯ ಒತ್ತಡವಿಲ್ಲ ಎಂದು ಪೆಂಗ್ವಿನ್ ಇಂಡಿಯಾ ಹೇಳಿದೆ. ಮಾತುಕತೆಯ ಸಂದರ್ಭದಲ್ಲಿ ‘ಒಂದು ನಿರ್ದಿಷ್ಟ ವಿಷಯ’ದ ಕುರಿತು ಎರಡೂ ಕಡೆಯವರ ನಡುವೆ ಒಮ್ಮತ ಮೂಡಿರಲಿಲ್ಲ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಈ ಆತ್ಮಕಥೆಯನ್ನು ಪ್ರಕಟಿಸಲು ಪೆಂಗ್ವಿನ್ ‘ನಿಜವಾಗಿಯೂ ಉತ್ಸುಕವಾಗಿತ್ತು’ ಎಂದು ಪ್ರಕಾಶಕರ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. ಇದು ‘ಕಷ್ಟಪಟ್ಟು ಪಡೆದುಕೊಂಡ ಕೃತಿ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕೃತಿಯ ವಿಷಯ ಗೌಪ್ಯವಾಗಿದ್ದು, ನಿರ್ಬಂಧದ ಅಡಿಯಲ್ಲಿ ಇರುವುದರಿಂದ ಯಾವುದೇ ಬಾಹ್ಯ ಒತ್ತಡ ಇರಲಿಲ್ಲ’ ಎಂದು ಪ್ರಕಾಶಕರು ಹೇಳಿದ್ದಾರೆ.
ಒಂದು ನಿರ್ದಿಷ್ಟ ವಿಷಯದ ಕುರಿತು ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪ್ರಕಟಣೆಯನ್ನು ಮುಂದುವರಿಸಲು ತಮಗೆ ಇಷ್ಟವಿಲ್ಲ ಎಂದು ಸೋನಿಯಾ ಗಾಂಧಿ ಅವರ ತಂಡ ಪೆಂಗ್ವಿನ್ ಇಂಡಿಯಾಗೆ ತಿಳಿಸಿತು ಎಂದು ಪ್ರಕಾಶಕರು ಹೇಳಿದ್ದಾರೆ.






