ಕೆ.ಸಿ.ವೇಣುಗೋಪಾಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂ ಸ್ಪರ್ಷ

PC | timesofindia
ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರಿದ್ದ ತಿರುವನಂತಪುರ- ದೆಹಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಸಂದೇಹ ಮತ್ತು ಮಾರ್ಗಮಧ್ಯದಲ್ಲಿ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದತ್ತ ವಿಮುಖಗೊಳಿಸಿ ತುರ್ತಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಘಟನೆ ಭಾನುವಾರ ನಡೆದಿದೆ.
ಏರ್ ಇಂಡಿಯಾ ಎಐ2455 ವಿಮಾನ ಸುರಕ್ಷಿತವಾಗಿ ಚೆನ್ನೈ ನಿಲ್ದಾಣದಲ್ಲಿ ಇಳಿದು ತುರ್ತು ತಪಾಸಣೆಗಳನ್ನು ನಡೆಸಲಾಯಿತು.
"ತಿರುವನಂತಪುರಂನಿಂದ ದೆಹಲಿಗೆ ಆ.10ರಂದು ಹೊರಟಿದ್ದ ಎಐ2455 ವಿಮಾನದ ತಾಂತ್ರಿಕ ಸಿಬ್ಬಂದಿ, ತಾಂತ್ರಿಕ ದೋಷ ಕಂಡುಬಂದ ಸಂದೇಹದಿಂದ ಮತ್ತು ವಾಯುಮಾರ್ಗದ ಪ್ರತಿಕೂಲ ಹವಾಮಾನ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಚೆನ್ನೈಗೆ ತಿರುಗಿಸಿ ಅಗತ್ಯ ತಪಾಸಣೆಗಳನ್ನು ನಡೆಸಲಾಯಿತು. ಪ್ರಯಾಣಿಕರಿಗೆ ಆದ ತೊಂದರೆಗಳಿಗೆ ನಾವು ವಿಷಾದಿಸುತ್ತೇವೆ. ಚೆನ್ನೈ ನಿಲ್ದಾಣದಲ್ಲಿ ನಮ್ಮ ಸಹೋದ್ಯೋಗಿಗಳು ಪ್ರಯಾಣಿಕರಿಗೆ ಆಗುವ ತೊಂದರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿ, ತ್ವರಿತವಾಗಿ ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟರು" ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
ವಿಮಾನದಲ್ಲಿದ್ದ ಕೆ.ಸಿ.ವೇಣುಗೋಪಾಲ್ ಅವರು "ಇದು ಭಯಾನಕ ಪ್ರಯಾಣವಾಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ. "ನಾನು ಸೇರಿದಂತೆ ಹಲವು ಮಂದಿ ಸಂಸದರು ಹಾಗೂ ನೂರಾರು ಯಾನಿಗಳು ಪ್ರಯಾಣಿಸುತ್ತಿದ್ದ ತಿರುವನಂತಪುರಂ-ದೆಹಲಿ ವಿಮಾನ (ಎಐ 2455) ದುರಂತ ಅಂತ್ಯ ಕಾಣುವ ಭೀತಿಯನ್ನು ಹುಟ್ಟಿಸಿತು" ಎಂದು ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ.
ವಿಳಂಬವಾಗಿ ಆರಂಭವಾದ ಯಾನ ಭಯಾನಕ ಪಯಣವಾಗಿ ಮಾರ್ಪಟ್ಟಿತು. ಟೇಕಾಫ್ ಆದ ತಕ್ಷಣ ವಿಮಾನದಲ್ಲಿ ಪ್ರಕ್ಷುಬ್ಧತೆ ಆರಂಭವಾಯಿತು. ಒಂದು ಗಂಟೆ ಬಳಿಕ ವಿಮಾನದ ಸಿಗ್ನಲ್ ದೋಷದ ಕಾರಣದಿಂದ ಚೆನ್ನೈಗೆ ತಿರುಗಿಸುತ್ತಿರುವುದಾಗಿ ಪೈಲಟ್ ಘೋಷಿಸಿದರು. ವಿಮಾನ ಇಳಿಯಲು ಅನುಮತಿ ಸಿಗಲು ಸುಮಾರು ಎರಡು ಗಂಟೆಗಳನ್ನು ವಿಮಾನ ನಿಲ್ದಾಣದ ಸುತ್ತ ಸುತ್ತಾಡುತ್ತಾ ಕಳೆಯಬೇಕಾಯಿತು. ಇದೇ ರನ್ವೇಯಲ್ಲಿ ಮತ್ತೊಂದು ವಿಮಾನ ಇದ್ದ ಕಾರಣದಿಂದ ಮೊದಲ ಪ್ರಯತ್ನ ನಿಜಕ್ಕೂ ಹೃದಯಸ್ತಂಭನಕಾರಕವಾಗಿತ್ತು. ಕ್ಷಣಾರ್ಧದಲ್ಲಿ ವಿಮಾನವನ್ನು ವಾಪಾಸು ಮೇಲಕ್ಕೇರಿಸಿದ ಕ್ಯಾಪ್ಟನ್ನ ದಿಢೀರ್ ನಿರ್ಧಾರದಿಂದಾಗಿ ನಮ್ಮೆಲ್ಲರ ಜೀವ ರಕ್ಷಣೆಯಾಯಿತು. ಎರಡನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು. ಕೌಶಲ ಮತ್ತು ಅದೃಷ್ಟದಿಂದ ನಾವೆಲ್ಲ ಪಾರಾದೆವು. ಪ್ರಯಾಣಿಕರ ಸುರಕ್ಷೆ ಅದೃಷ್ಟದ ಕಾರಣದಿಂದ ಆಗಬಾರದು. ಡಿಜಿಸಿಎ ಮತ್ತು ವಿಮಾನಯಾನ ಸಚಿವಾಲಯ ತಕ್ಷಣವೇ ಈ ಘಟನೆ ಬಗ್ಗೆ ತನಿಖೆ ನಡೆಸಿ, ಹೊಣೆಗಾರಿಕೆ ನಿಗದಿಪಡಿಸಿ ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು" ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.







