ಹರ್ಯಾಣ | ಒಂದೇ ಕುಟುಂಬದ ಏಳು ಜನರ ಆತ್ಮಹತ್ಯೆ; 20 ಕೋಟಿ ರೂ. ಸಾಲದ ಹೊರೆ ಕಾರಣ

Photo : Hindustan Times
ಪಂಚಕುಲ: ಸೋಮವಾರ ರಾತ್ರಿ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಗಳಾದ ಒಂದೇ ಕುಟುಂಬದ ಏಳು ಜನರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, 20 ಕೋಟಿ ರೂ.ಗಳ ಸಾಲದ ಹೊರೆ ಇದಕ್ಕೆ ಕಾರಣ ಎನ್ನಲಾಗಿದೆ.
ಪ್ರವೀಣ್ ಮಿತ್ತಲ್, ಪತ್ನಿ, ತಂದೆ-ತಾಯಿ ಮತ್ತು ಇಬ್ಬರು ಅವಳಿ ಪುತ್ರಿಯರು ಸೇರಿದಂತೆ ಮೂವರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬವು ಆತ್ಮಹತ್ಯಾ ಚೀಟಿಯೊಂದನ್ನು ಬರೆದಿಟ್ಟಿದ್ದು, ಪ್ರವೀಣ್ ಅವರ ಸೋದರ ಸಂಬಂಧಿ ಸಂದೀಪ್ ಅಗರ್ವಾಲ್ ತಮ್ಮ ಅಂತಿಮ ಸಂಸ್ಕಾರವನ್ನು ಮಾಡಬೇಕು ಎಂದು ತಿಳಿಸಿದೆ. ಐದು ದಿನಗಳ ಹಿಂದಷ್ಟೇ ಪ್ರವೀಣ್ ಜೊತೆ ಮಾತನಾಡಿದ್ದ ಅಗರ್ವಾಲ್, ಅವರಿಗೆ ಸುಮಾರು 20 ಕೋಟಿ ರೂ.ಗಳ ಸಾಲವಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಮಿತ್ತಲ್ ಹಿಮಾಚಲ ಪ್ರದೇಶದ ಬದ್ದಿಯಲ್ಲಿ ಗುಜರಿ ಫ್ಯಾಕ್ಟರಿಯನ್ನು ಸ್ಥಾಪಿಸಿದ್ದು, ಹೆಚ್ಚುತ್ತಿದ್ದ ಸಾಲದಿಂದಾಗಿ ಬ್ಯಾಂಕು ಅದನ್ನು ಜಪ್ತಿ ಮಾಡಿಕೊಂಡಿತ್ತು. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಮಿತ್ತಲ್ ಅದೊಂದು ದಿನ ಪಂಚಕುಲ ತೊರೆದು ಡೆಹ್ರಾಡೂನ್ ಗೆ ತೆರಳಿದ್ದರು. ಅಲ್ಲಿ ಸುಮಾರು ಆರು ವರ್ಷಗಳ ಕಾಲ ವಾಸವಿದ್ದ ಅವರು ಕುಟುಂಬದ ಸಂಪರ್ಕದಲ್ಲಿರಲಿಲ್ಲ.
ನಂತರ ಪಂಜಾಬಿನ ಖಾರಾರ್ ಗೆ ತೆರಳಿದ್ದ ಮಿತ್ತಲ್ ಬಳಿಕ ಹರ್ಯಾಣದ ಪಿಂಜೋರ್ ನಲ್ಲಿಯ ಮಾವನ ಮನೆಯಲ್ಲಿ ವಾಸವಾಗಿದ್ದರು ಮತ್ತು ಒಂದು ತಿಂಗಳ ಹಿಂದಷ್ಟೇ ಪಂಚಕುಲಕ್ಕೆ ಮರಳಿದ್ದರು.
ಹಿಸಾರ್ನ ಬರ್ವಾಲಾ ಮೂಲದ ಪ್ರವೀಣ್ ಪಂಚಕುಲದ ಸಾಕೇತ್ರಿ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದರು.
ಬ್ಯಾಂಕು ಅವರ ಎರಡು ಫ್ಲ್ಯಾಟ್ಗಳು ಮತ್ತು ವಾಹನಗಳನ್ನೂ ಜಪ್ತಿ ಮಾಡಿತ್ತು.
ಪ್ರಸ್ತುತ ಡೆಹ್ರಾಡೂನಿನಲ್ಲಿ ವಾಸವಿದ್ದ ಪ್ರವೀಣ್ ಮತ್ತು ಅವರ ಕುಟುಂಬದ ಸದಸ್ಯರು ಬಾಗೇಶ್ವರ ಧಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಯುವಿಹಾರಕ್ಕೆ ತೆರಳಿದ್ದ ಸ್ಥಳೀಯ ನಿವಾಸಿ ಪುನೀತ ರಾಣಾ ಎನ್ನುವವರು ತನ್ನ ಕಾರಿನ ಹಿಂದೆ ನಿಲ್ಲಿಸಿದ್ದ ಉತ್ತರಾಖಂಡ ನೋಂದಣಿಯ ಕಾರೊಂದನ್ನು ಗಮನಿಸಿದ್ದರು. ಪ್ರವೀಣ್ ಕಾರಿನ ಸಮೀಪ ಕಾಲುದಾರಿಯಲ್ಲಿ ಕುಳಿತಿದ್ದರು.
ಕಾರಿನಿಂದ ಟವೆಲ್ ನೇತಾಡುತ್ತಿದ್ದುದು ರಾಣಾರ ಕುತೂಹಲವನ್ನು ಕೆರಳಿಸಿತ್ತು. ಅವರು ತನ್ನ ಸೋದರನೊಂದಿಗೆ ಪ್ರವೀಣ ಬಳಿ ಹೋಗಿ ವಿಚಾರಿಸಿದ್ದರು. ತಾವು ಬಾಗೇಶ್ವರ ಧಾಮದಿಂದ ಮರಳುತ್ತಿದ್ದು,ತಮಗೆ ಎಲ್ಲಿಯೂ ಹೋಟೆಲ್ ಸಿಗಲಿಲ್ಲ. ಹೀಗಾಗಿ ಕಾರಿನಲ್ಲಿಯೇ ರಾತ್ರಿ ಕಳೆಯಲು ನಿರ್ಧರಿಸಿದ್ದಾಗಿ ಪ್ರವೀಣ್ ತಿಳಿಸಿದ್ದರು. ಕಾರನ್ನು ಮಾರುಕಟ್ಟೆ ಪ್ರದೇಶಕ್ಕೆ ಒಯ್ಯುವಂತೆ ರಾಣಾ ಅವರಿಗೆ ಸೂಚಿಸಿದ್ದರು.
ಪ್ರವೀಣ ಕಾರನ್ನು ಸ್ಟಾರ್ಟ್ ಮಾಡಲು ಎದ್ದು ನಿಂತಾಗ ಏನೋ ಯಡವಟ್ಟಾಗಿದೆ ಎಂದು ರಾಣಾಗೆ ಅನಿಸಿತ್ತು. ಅವರು ಕಾರಿನೊಳಗೆ ಇಣುಕಿದಾಗ ಭಯಾನಕ ದೃಶ್ಯ ಕಂಡು ಬಂದಿತ್ತು. ಆರು ಮೃತದೇಹಗಳು ಅದರಲ್ಲಿದ್ದು, ಪರಸ್ಪರರ ಮೇಲೆ ವಾಂತಿ ಮಾಡಿಕೊಂಡಿದ್ದರು. ರಾಣಾ ಪ್ರವೀಣರನ್ನು ದೂರ ಎಳೆದೊಯ್ದು ವಿಷಯವೇನು ಎಂದು ವಿಚಾರಿಸಿದ್ದರು. ‘ನನ್ನ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಐದು ನಿಮಿಷದಲ್ಲಿ ನಾನೂ ಸಾಯುತ್ತೇನೆ’ ಎಂದು ಪ್ರವೀಣ ಉತ್ತರಿಸಿದ್ದರು. ಭಾರೀ ಸಾಲದ ಹೊರೆ ತನ್ನ ತಲೆಯ ಮೇಲಿದೆ ಎಂದು ತಿಳಿಸಿದ್ದರು.
ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಎಲ್ಲರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಆ್ಯಂಬುಲೆನ್ಸ್ ಸಕಾಲದಲ್ಲಿ ಬಂದಿದ್ದರೆ ಪ್ರವೀಣ್ ಬದುಕುಳಿಯುತ್ತಿದ್ದರು ಎಂದು ರಾಣಾ ಹೇಳಿದರು.







