ಹರ್ಯಾಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಹೊಸ ತಿರುವು ನೀಡಿದ ಎಎಸ್ಐ ಡೆತ್ ನೋಟ್!

ಸಂದೀಪ ಲಾಥೇರ್ , ವೈ ಪೂರಣ್ ಕುಮಾರ್ | Photo Credit : NDTV
ಚಂಡೀಗಢ: ರೋಹ್ಟಕ್ ಸುಲಿಗೆ ಪ್ರಕರಣದ ತನಿಖಾಧಿಕಾರಿ ಸಂದೀಪ ಲಾಥೇರ್ ಮಂಗಳವಾರ ತನ್ನ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಹಿರಿಯ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ರೋಹ್ಟಕ್ ಸುಲಿಗೆ ಪ್ರಕರಣದ ತನಿಖಾಧಿಕಾರಿ ಸಂದೀಪ ಲಾಥೇರ್ ಮಂಗಳವಾರ ತನ್ನ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂದೀಪ್ ಲಾಥೇರ್ ಅವರು ಡೆತ್ ನೋಟ್ ಮತ್ತು ಆತ್ಮಹತ್ಯೆಗೆ ಮೊದಲು ಮಾಡಿದ ಕೊನೆಯ ವೀಡಿಯೊದಲ್ಲಿ ವೈ ಪೂರಣ್ ಕುಮಾರ್ ಭ್ರಷ್ಟ ಅಧಿಕಾರಿಯಾಗಿದ್ದರು ಎಂದು ಆರೋಪಿಸಿದ್ದಾರೆ.
ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅ.7ರಂದು ಚಂಡೀಗಢದ ತನ್ನ ನಿವಾಸದಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
"ಅವರು ಭ್ರಷ್ಟ ಅಧಿಕಾರಿಗಳನ್ನು ನಿಯೋಜಿಸುತ್ತಿದ್ದರು ಮತ್ತು ಜಾತಿಯ ಆಧಾರದಲ್ಲಿ ಅವರ ವರ್ಗಾವಣೆ ಮಾಡುತ್ತಿದ್ದರು. ಲಂಚದ ಆರೋಪಗಳು ಬೆಳಕಿಗೆ ಬಂದಾಗ, ಐಪಿಎಸ್ ಅಧಿಕಾರಿ ಅದಕ್ಕೆ ಜಾತಿ ಬಣ್ಣ ನೀಡಲು ಪ್ರಯತ್ನಿಸಿ ಆತ್ಮಹತ್ಯೆ ಮಾಡಿಕೊಂಡರು" ಎಂದು ಎಂದು ಲಾಥೇರ್ ವೀಡಿಯೊದಲ್ಲಿ ಆರೋಪಿಸಿದ್ದಾರೆ.
‘ನಾನು ಸತ್ಯಕ್ಕಾಗಿ ನನ್ನ ಪ್ರಾಣ ತ್ಯಾಗ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕತೆಯೊಂದಿಗೆ ನಿಂತಿದ್ದೇನೆ ಎಂಬ ಹೆಮ್ಮೆ ನನಗಿದೆ. ಇದು ದೇಶವನ್ನು ಜಾಗ್ರತಗೊಳಿಸಲು ಮುಖ್ಯವಾಗಿದೆ’ ಎಂದು ಹೇಳಿರುವ ಲಾಥೇರ್, ತನ್ನ ಕುಟುಂಬದ ಸದಸ್ಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು ಎಂದು ಹೇಳಿದ್ದಾರೆ.







