ಹರ್ಯಾಣ: ದೇವಸ್ಥಾನ ಬಾವಿ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ (Photo: thewire.in)
ಹಿಸಾರ್:ಹರ್ಯಾಣದ ಹಿಸಾರ್ ಜಿಲ್ಲೆಯ ಸಿಸೈ ಬೋಲನ್ ಗ್ರಾಮದಲ್ಲಿ ರವಿವಾರ ದೇವಸ್ತಾನವೊಂದರ ಹಳೆಯ ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಲ್ ಎಂಬ ಮೂರನೇ ವ್ಯಕ್ತಿಯನ್ನು ಬಾವಿಯಿಂದ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಜೈವೀರ್ (43) ಮೊದಲು ದೇವಸ್ಥಾನದ ಆವರಣದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸಲು ಇಳಿದರು.
ಸ್ವಲ್ಪ ಸಮಯದ ನಂತರ, ಜೈವೀರ್ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದಾಗ ಸುನೀಲ್ (32) ಜೈವೀರ್ ಅವರನ್ನು ರಕ್ಷಿಸಲು ಬಾವಿಗೆ ಇಳಿದರು. ಬಳಿಕ ಅನಿಲ್ ಕೂಡ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೂವರನ್ನು ಬಾವಿಯಿಂದ ಹೊರ ತೆಗೆದರು. ಆದರೆ ಆ ವೇಳೆಗಾಗಲೇ ಜೈವೀರ್ ಹಾಗೂ ಸುನೀಲ್ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇಬ್ಬರು ಬಾವಿಯಲ್ಲಿನ ಯಾವುದೇ ವಿಷಕಾರಿ ಅನಿಲವನ್ನು ಉಸಿರಾಡಿ ಸಾವನ್ನಪ್ಪಿರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ,
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







