‘ಅಮಿತ್ ಶಾ ಕರೆದಿದ್ದಕ್ಕೆ ದಿಲ್ಲಿಗೆ ಧಾವಿಸುತ್ತಿದ್ದೀರಾ?’: ಯೂಸುಫ್ ಪಠಾಣ್ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ

Photo Credit : X
ಹೊಸದಿಲ್ಲಿ: ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರ ದಿಲ್ಲಿ ಭೇಟಿಯನ್ನು ಪ್ರಶ್ನಿಸಿರುವ ಪಕ್ಷದ ಸಂಸದೆ ಮಹುವಾ ಮೊಯಿತ್ರಾ, ‘ಅಮಿತ್ ಶಾ ಕರೆದಿದ್ದಕ್ಕೆ ದಿಲ್ಲಿಗೆ ಧಾವಿಸುತ್ತಿದ್ದೀರಾ?’ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಿಎಂಸಿಯ ಸುಮಾರು 20 ಲೋಕಸಭಾ ಸದಸ್ಯರು ಬಿಜೆಪಿ ನೇತೃತ್ವದ NDA ಗೆ ಬೆಂಬಲ ಘೋಷಿಸಲು ಮುಂದಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಮೊಯಿತ್ರಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಯೂಸುಫ್ ಪಠಾಣ್, ಅಮಿತ್ ಶಾ ಅವರು ಕರೆ ಮಾಡಿದ್ದರಿಂದ ನೀವು ದಿಲ್ಲಿಗೆ ಧಾವಿಸುತ್ತಿದ್ದೀರಾ? ಸ್ವಲ್ಪ ಧೈರ್ಯ ತೋರಿಸಿ. ನೀವು ಭಾರತಕ್ಕಾಗಿ ಆಡಿದ್ದೀರಿ. ನಮ್ಮ ಜಿಲ್ಲೆ ನಿಮಗೆ ಭಾರಿ ಬಹುಮತ ನೀಡಿದೆ. ಸ್ವಲ್ಪ ನಾಚಿಕೆ ಮತ್ತು ಬೆನ್ನುಮೂಳೆ ಹೊಂದಿರಿ’ ಎಂದು ಅವರು ಬರೆದಿದ್ದಾರೆ.
ಬಂಡಾಯ ಸಂಸದರ ವಿರುದ್ಧವೂ ವಾಗ್ದಾಳಿ ನಡೆಸಿರುವ ಮೊಯಿತ್ರಾ, ‘2024ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್ನಲ್ಲಿ ಗೆದ್ದ ಸಂಸದರಿಗೆ ದೊರೆತ ಜನಾದೇಶ ಎನ್ಡಿಎಗೆ ಸೇರಿದ್ದಲ್ಲ. ಬಿಜೆಪಿಗೆ ಹೋಗಲು ಬಯಸುವವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಬಿಜೆಪಿ ಅಭ್ಯರ್ಥಿಗಳಾಗಿ ಮತ್ತೆ ಜನರ ಮುಂದೆ ಹೋಗಲಿ’ ಎಂದು ಹೇಳಿದ್ದಾರೆ.
ಟಿಎಂಸಿಯ ಮುಖ್ಯ ಸಚೇತಕ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸುಮಾರು 20 ಸಂಸದರು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಎನ್ಡಿಎಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಯು ಪಕ್ಷದ ಸಂಸದೀಯ ಘಟಕದಲ್ಲಿ ಭಿನ್ನಮತವನ್ನು ಬಹಿರಂಗಗೊಳಿಸಿದೆ.
‘ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ನಮ್ಮ ಮುಂದಿನ ರಾಜಕೀಯ ಹಾದಿ ಎನ್ಡಿಎ ಜತೆಗೆ ಹೊಂದಿಕೆಯಾಗಬೇಕು ಎಂದು ನಂಬಿದ್ದೇವೆ’ ಎಂದು ಕಾಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ರಕ್ಷಣೆ ಪಡೆಯುವ ಉದ್ದೇಶದಿಂದ ಬಂಡಾಯ ಸಂಸದರು ಪ್ರತ್ಯೇಕ ಸಂಸದೀಯ ಬಣವಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯು ಟಿಎಂಸಿಯಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ.
And @iamyusufpathan you are rushing to Delhi because @AmitShah has called you? Have some courage. You played for India. Our district voted you in with a huge margin. Have some shame & some spine.
— Mahua Moitra (@MahuaMoitra) June 8, 2026






