"ಶರದ್ ಅವರ ಪಾದದ ಬಳಿ ತಲೆ ಇಟ್ಟು ಕ್ಷಮೆ ಯಾಚಿಸುತ್ತೇನೆ": ಪವಾರ್ ವಿರುದ್ಧದ ಹೇಳಿಕೆಗೆ ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್
‘ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಮನವಿ ಮಾಡುತ್ತೇನೆ’

Photo: X/@VijayWadettiwar, PTI
ಮುಂಬೈ: ಎನ್ಸಿಪಿ (ಶರದ್ ಪವಾರ್ ಬಣ) ವರಿಷ್ಠ ಶರದ್ ಪವಾರ್ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿದಾರ್, ರವಿವಾರ ಕ್ಷಮೆಯಾಚಿಸಿದ್ದಾರೆ. “ಶರದ್ ಪವಾರ್ ಅವರ ಪಾದದ ಬಳಿ ತಲೆ ಇಟ್ಟು ಕ್ಷಮೆ ಯಾಚಿಸುತ್ತೇನೆ. ಆದರೆ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ನಡುವಿನ ಮೈತ್ರಿಕೂಟದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಶರದ್ ಪವಾರ್ ಅವರನ್ನು ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂಬೈಗೆ ತೆರಳಿ ಶರದ್ ಪವಾರ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಕುರಿತಂತೆ ಎನ್ಸಿಪಿ (ಶರದ್ ಪವಾರ್ ಬಣ) ತಳೆದಿರುವ ನಿಲುವಿನಿಂದ ಕಾಂಗ್ರೆಸ್ ಮತ್ತು ಆ ಪಕ್ಷದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಮಸೂದೆಯನ್ನು ಬೆಂಬಲಿಸುವ ಸುಳಿವು ನೀಡಿದ್ದ ಎನ್ಸಿಪಿ (ಶರದ್ ಪವಾರ್ ಬಣ)ವನ್ನು ಶನಿವಾರ ಟೀಕಿಸಿದ್ದ ವಡೆಟ್ಟಿದಾರ್, ಶರದ್ ಪವಾರ್ ಪದೇ ಪದೇ ರಾಜಕೀಯ ಮಿತ್ರಪಕ್ಷಗಳಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಧಿಕಾರವಿಲ್ಲದೆ ಎನ್ಸಿಪಿ (ಶರದ್ ಪವಾರ್ ಬಣ) ಬದುಕುಳಿಯಲು ಸಾಧ್ಯವಿಲ್ಲ ಎಂದೂ ಹೇಳಿದ್ದರು. ಕೋಮುವಾದಿ ಮತ್ತು ಜಾತಿವಾದಿ ಎಂದು ತಾವೇ ಹೇಳಿದ್ದ ಶಕ್ತಿಗಳೊಂದಿಗೆ ಕೈಜೋಡಿಸಲು ಶರದ್ ಪವಾರ್ ಮುಂದಾಗಿರುವುದನ್ನೂ ಪ್ರಶ್ನಿಸಿದ್ದರು.
ವಡೆಟ್ಟಿದಾರ್ ಅವರ ಹೇಳಿಕೆಯಿಂದ ಆಕ್ರೋಶಗೊಂಡ ಎನ್ಸಿಪಿ (ಶರದ್ ಪವಾರ್ ಬಣ) ನಾಯಕರು, ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಶರದ್ ಪವಾರ್ ವಿರುದ್ಧದ ವೈಯಕ್ತಿಕ ಟೀಕೆಗಳು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದ್ದ ಪಕ್ಷದ ನಾಯಕರು, ಶನಿವಾರ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಿಂದ ದೂರ ಉಳಿದಿದ್ದರು.
ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುವ ಪ್ರಯತ್ನವಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಶರದ್ ಪವಾರ್ ಅವರನ್ನು ಭೇಟಿಯಾಗಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಮನವೊಲಿಸಲು ಮುಂದಾಗಿದ್ದಾರೆ.






