ಉತ್ತರ, ಕೇಂದ್ರ ಭಾರತದಲ್ಲಿ ಮತ್ತೆ ಉಷ್ಣಗಾಳಿ ಭೀತಿ

ಹೊಸದಿಲ್ಲಿ: ವಾಯವ್ಯ ಮತ್ತು ಕೇಂದ್ರ ಭಾರತದಲ್ಲಿ ಬಿದ್ದ ಮಳೆಯಿಂದಾಗಿ ಬೇಸಿಗೆಯ ಹೊಡೆತದಿಂದ ಅಲ್ಪವಿರಾಮ ಪಡೆದಿದ್ದ ಈ ಭಾಗದ ಜನತೆ ಮತ್ತೆ ಉಷ್ಣಗಾಳಿಯ ಭೀತಿ ಎದುರಿಸುತ್ತಿದ್ದಾರೆ. ಮುಂದಿನ ಐದು ದಿನಗಳಲ್ಲಿ ವಾಯವ್ಯ ಮತ್ತು ಕೇಂದ್ರ ಭಾರತದಲ್ಲಿ ತಾಪಮಾನ 2-3 ಡಿಗ್ರಿ ಸೆಲ್ಷಿಯಸ್ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪರಿಣಾಮವಾಗಿ ದೇಶದ ಈ ಭಾಗದಲ್ಲಿ ಉಷ್ಣಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.
ಈ ತಿಂಗಳ 22 ರಿಂದ 24ರವರೆಗೆ ಉತ್ತರ ಪ್ರದೇಶದ ದಕ್ಷಿಣ ಭಾಗ ಮತ್ತು ಮಧ್ಯಪ್ರದೇಶ, 23-24ರ ಅವಧಿಯಲ್ಲಿ ರಾಜಸ್ಥಾನ ಮತ್ತು ಹರ್ಯಾಣ, 21-23ರ ಅವಧಿಯಲ್ಲಿ ವಿದರ್ಭ ಪ್ರದೇಶಗಳಲ್ಲಿ ಉಷ್ಣಗಾಳಿಯ ವಾತಾವರಣ ಇರಲಿದೆ. ಈ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮುಖ್ಯವಾಗಿ ವೃದ್ಧರು ಮತ್ತು ಮಕ್ಕಳು ಬಿಸಿಲಿಗೆ ಹೊರ ಹೋಗದಂತೆ ಎಚ್ಚರಿಸಿದೆ. ಈಶಾನ್ಯ ಭಾರತದಲ್ಲಿ ಮಂಗಳವಾರದಿಂದ ಭಾರಿ ಮಳೆಯಾಗಲಿದ್ದು, ಕ್ರಮೇಣ ಮುಂದಿನ ನಾಲ್ಕು ದಿನಗಳಲ್ಲಿ 4-6 ಡಿಗ್ರಿ ಸೆಲ್ಷಿಯಸ್ ತಾಪಮಾನ ಏರಿಕೆಯಾಗಿದೆ.
ಏಪ್ರಿಲ್ 8ರ ಸುಮಾರಿಗೆ ಉತ್ತರ ಭಾರತ ಬೇಸಿಗೆಯ ಬೇಗೆಯಿಂದ ತತ್ತರಿಸಿದ್ದು, ಪಶ್ಚಿಮ ರಾಜಸ್ಥಾನದಲ್ಲಿ ತಾಪಮಾನ 46 ಡಿಗ್ರಿ ಸೆಲ್ಷಿಯಸ್ ದಾಟಿತ್ತು. ಆ ಬಳಿಕ ಏಪ್ರಿಲ್ 9-12ರ ಅವಧಿಯಲ್ಲಿ ಮತ್ತು ಕಳೆದ ವಾರ ಮಳೆ ಬಿದ್ದ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ತಾಪಮಾನ ಇಳಿಕೆಯಾಗಿತ್ತು. ರವಿವಾರ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಭಾರತದ ಅತ್ಯಧಿಕ ತಾಪಮಾನ ಅಂದರೆ 44.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.





