ಮುಂಬೈನಲ್ಲಿ ಭಾರೀ ಮಳೆ : ಓರ್ವ ಮೃತ್ಯು, ರೆಡ್ ಅಲರ್ಟ್ ಘೋಷಣೆ

ಸಾಂದರ್ಭಿಕ ಚಿತ್ರ
ಮುಂಬೈ,ಜು.5: ಮುಂಬೈ ಮತ್ತು ನೆರೆಯ ನಗರಗಳಲ್ಲಿ ಶನಿವಾರ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಬೆಳಗಿನ ವೇಳೆಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಆದಾಗ್ಯೂ ನಿರಂತರ ಮಳೆ ಮತ್ತು ಕೆಲವು ಕಡೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರವಿವಾರ ಮುಂಬೈ ಮತ್ತು ರಾಯಗಢ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿತ್ತು.
ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಅತ್ಯಂತ ತುರ್ತು ಕೆಲಸಗಳಿದ್ದರೆ ಮಾತ್ರವೇ ಹೊರಗಡೆ ಬರಬೇಕು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆಯು ಮನವಿ ಮಾಡಿಕೊಂಡಿದೆ.
ಶನಿವಾರ ಬೆಳಿಗ್ಗೆವರೆಗಿನ 24 ಗಂಟೆಗಳಲ್ಲಿ ನಗರದ ಹಲವು ಪ್ರದೇಶಗಳಲ್ಲಿ 200 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ 300 ಮಿ.ಮೀ.ನಷ್ಟು ದಾಖಲೆ ಪ್ರಮಾಣದ ಸುರಿದಿದೆ.
ರವಿವಾರ ಬೆಳಿಗ್ಗೆ ಮೆಟ್ರೊ ಮತ್ತು ಬೆಸ್ಟ್ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಲೋಕಲ್ ರೈಲುಗಳು ವಿಳಂಬವಾಗಿ ಚಲಿಸುತ್ತಿದ್ದವು.
ತಗ್ಗು ಪ್ರದೇಶಗಳಲ್ಲಿ ಮತ್ತು ಕರಾವಳಿಯುದ್ದಕ್ಕೂ ವಾಸಿಸುವ ಜನರು ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ರವಿವಾರ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ, ರಸ್ತೆಗಳು ಕುಸಿದಿವೆ, ಮರಗಳು ಮತ್ತು ಮನೆಗಳು ಧರೆಗುರುಳಿವೆ, ಹಾಗೂ ರಸ್ತೆ ಮತ್ತು ರೈಲು ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.
ನಿರಂತರ ಮಳೆಯು ನೆರೆಯ ಥಾಣೆ, ಪಾಲ್ಘರ್, ನವಿ ಮುಂಬೈ ಹಾಗೂ ಪುಣೆ ಪ್ರದೇಶಗಳಲ್ಲಿಯೂ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಭಾಗಗಳಲ್ಲಿ ಭೂಕುಸಿತಗಳು ಸಂಭವಿಸಿದ್ದು, ಜಲಾವೃತಗೊಂಡ ರಸ್ತೆಗಳನ್ನು ಮುಚ್ಚಲಾಗಿದೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ.
ಮರ ಬಿದ್ದು ವ್ಯಕ್ತಿ ಮೃತ್ಯು
ರವಿವಾರ ಅಪರಾಹ್ನ ಭಾರೀ ಮಳೆಯ ನಡುವೆ ಮುಂಬೈನ ಕುರ್ಲಾ ವೆಸ್ಟ್ನಲ್ಲಿ ಅಂಗಡಿಯೊಂದರ ಮೇಲೆ ಮರ ಬಿದ್ದ ಪರಿಣಾಮ ಯೂನುಸ್ ಕುಂದಾವಾಲಾ (63) ಎನ್ನುವವರು ಮೃತಪಟ್ಟಿದ್ದಾರೆ. ಭಾರೀ ಮಳೆ ಮತ್ತು ಕಡಿಮೆ ಗೋಚರತೆಯ ಕಾರಣದಿಂದಾಗಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಬೆಳಿಗ್ಗೆ 10.17ರಿಂದ ಸುಮಾರು ಒಂದು ಗಂಟೆ ಕಾಲ ರನ್ವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಶನಿವಾರ ರಾತ್ರಿ ಥಾಣೆಯ ವಾಗ್ಳೆ ಎಸ್ಟೇಟ್ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಇಬ್ಬರು ಪಾದಚಾರಿಗಳು ಗಾಯಗೊಂಡಿದ್ದಾರೆ.
ಪುಣೆಯ ಕತ್ರಾಜ್ ಪ್ರದೇಶದಲ್ಲಿ ರವಿವಾರ ವಸತಿ ಸಂಕೀರ್ಣವೊಂದರ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಕನಿಷ್ಠ 14 ವಾಹನಗಳು ಜಖಂಗೊಂಡಿವೆ.
ಮುಕೇಶ ಅಂಬಾನಿ ಸ್ವಲ್ಪದರಲ್ಲಿ ಪಾರು
ರವಿವಾರ ಉಪನಗರ ಬಾಂದ್ರಾದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರ ಬೆಂಗಾವಲು ವಾಹನಗಳ ಮುಂಭಾಗದಲ್ಲೇ ಮರವೊಂದು ಉರುಳಿ ಬಿದ್ದಿದ್ದು,ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅಂಬಾನಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.






