ಮಹಾ ಮಳೆಗೆ ಮುಳುಗಿದ ಮುಂಬೈ; ಜನಜೀವನ ಅಸ್ತವ್ಯಸ್ತ

ಮುಂಬೈ: ಮಹಾನಗರದಲ್ಲಿ 84 ಗಂಟೆಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಅವಧಿಯಲ್ಲಿ 500 ಮಿಲಿಮೀಟರ್ ಮಳೆ ಬಿದ್ದಿದೆ. ಮಹಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಆಗಸ್ಟ್ 18 ಮತ್ತು 19ರಂದು ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ರಾಜ್ಯಾದ್ಯಂತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಸುಮಾರು ಏಳು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ, ನವಿ ಮುಂಬೈ, ಥಾಣೆ, ಪಾಲ್ಘರ್ ಮತ್ತು ಮಿರಾ ಭಯಾಂದೆರ್ ಪೌರಸಂಸ್ಥೆಗಳು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿವೆ. ಮುಂಬೈ ವಿವಿ 32 ಪರೀಕ್ಷೆಗಳನ್ನು ಆಗಸ್ಟ್ 23ಕ್ಕೆ ಮುಂದೂಡಿದೆ.
ಕಾಂಪೌಂಡ್ ಗೋಡೆ ಕುಸಿದು 75 ವರ್ಷದ ಕಾವಲುಗಾರ ನೆಪೀಯನ್ ಸೀ ರಸ್ತೆಯಲ್ಲಿ ಮೃತಪಟ್ಟಿದ್ದರೆ, ಕಂಜೂರ್ ಮಾರ್ಗದಲ್ಲಿ ವಿದ್ಯುತ್ ಸ್ಪರ್ಷದಿಂದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಮಿಥಿ ನದಿ ದಾಟುವ ಪ್ರಯತ್ನದಲ್ಲಿ 24 ವರ್ಷದ ಯುವಕನೊಬ್ಬ ನಾಪತ್ತೆಯಾಗಿದ್ದು, ಸಹರ್ ನಲ್ಲಿ ಮರಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಚೆಂಬೂರು ಮತ್ತು ದಾದರ್ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ದಾದರ್ ನಲ್ಲಿ ಎಂಟು ಗಂಟೆಗಳಲ್ಲಿ 100 ಮಿಲಿಮೀಟರ್ ಮಳೆ ಬಿದ್ದಿದೆ.
ವಿಮಾನ ಸಂಚಾರಕ್ಕೂ ಅಡಚಣೆಯಾಗಿದ್ದು, ಒಂದು ವಿಮಾನದ ಪಥ ಬದಲಿಸಿದ್ದರೆ 10 ವಿಮಾನಗಳು ಹಲವು ಸುತ್ತು ಹೊಡೆದವು. ಕುರ್ಲಾ, ಗೋವಂಡಿ, ತಿಲಕ್ ನಗರ ಹಾಗೂ ಚೆಂಬೂರ್ ನಲ್ಲಿ ಬಹಳಷ್ಟು ಕಡೆ ನೀರು ನಿಂತ ಹಿನ್ನೆಲೆಯಲ್ಲಿ ರೈಲು ಸಂಚಾರವೂ ವಿಳಂಬವಾಗಿದೆ.







