ಹೇಮಂತ್ ಕರ್ಕರೆ ಸಾವು ‘ಕರ್ಮಫಲ’: ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿಗೆ ಶೆಫಾಲಿ ವೈದ್ಯ ಸಮರ್ಥನೆ

ಶೆಫಾಲಿ ವೈದ್ಯ |Screengrab: Instagram
ಹೊಸದಿಲ್ಲಿ, ಎ.10: ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವನ್ನು “ಕರ್ಮಫಲ” ಎಂದು ಹೇಳಿರುವ ಅಂಕಣಕಾರ್ತಿ ಶೆಫಾಲಿ ವೈದ್ಯ, ಕರ್ನಲ್ ಶ್ರೀಕಾಂತ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ನೀಡಿರುವುದನ್ನು ಸಮರ್ಥಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ವೈದ್ಯ, “ಬ್ರಿಗೇಡಿಯರ್ ಆಗಿ ಕರ್ನಲ್ ಪುರೋಹಿತ್ ನೇಮಕ ಮಾಡಲಾಗುತ್ತಿದೆ. ತಪ್ಪಾಗಿ ಆರೋಪಿಸಲ್ಪಟ್ಟು, ಸುಳ್ಳು ಪ್ರಕರಣಗಳಲ್ಲಿ ಸಿಲುಕಿ, ಊಹಿಸಲಾಗದ ಮಟ್ಟದ ಕಿರುಕುಳ ಅನುಭವಿಸಿ, ತಮ್ಮ ಜೀವನದ ಹಲವು ವರ್ಷಗಳನ್ನು ಕಳೆದುಕೊಂಡ ಅಧಿಕಾರಿಯೊಬ್ಬರ ಘನತೆಯನ್ನು ಮರುಸ್ಥಾಪಿಸಲು ಭಾರತೀಯ ಸೇನೆ ಕೈಗೊಂಡಿರುವುದು ಮಹತ್ವದ ಹೆಜ್ಜೆ. ದೇಶವಿರೋಧಿ ಕಾಂಗ್ರೆಸ್ ಗೆ ಧನ್ಯವಾದ” ಎಂದು ಹೇಳಿದ್ದಾರೆ.
“ಕಸಬ್ ಕೈಯಲ್ಲಿ ಕರ್ಕರೆ ಮೃತಪಟ್ಟದ್ದು ಬಹುತೇಕ ಕರ್ಮಫಲ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಇತರರನ್ನು ಸುಳ್ಳು ಭಯೋತ್ಪಾದನೆ ಪ್ರಕರಣಗಳಲ್ಲಿ ಕಿರುಕುಳ ನೀಡಿದ ಪರಿಣಾಮ ಇದಾಗಿದೆ. ಇದೇ ಮಾತು ಪರಂಬೀರ್ ಸಿಂಗ್ ಗೂ ಅನ್ವಯಿಸುತ್ತದೆ” ಎಂದು ಅವರು ಹೇಳಿದ್ದಾರೆ.
2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಳೆದ ವರ್ಷ ಖುಲಾಸೆಯಾಗಿದ್ದ ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ನೀಡಲು ಅನುಮೋದನೆ ದೊರೆತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. ‘The Indian Express’ ವರದಿ ಪ್ರಕಾರ, Armed Forces Tribunal (AFT) ಅವರ ನಿವೃತ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಕೆಲವೇ ಅವಧಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವರದಿಯ ಪ್ರಕಾರ, ಪುರೋಹಿತ್ ಕನಿಷ್ಠ ಇನ್ನೂ ಎರಡು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಕರ್ನಲ್ ಹುದ್ದೆಯ ನಿವೃತ್ತಿ ವಯಸ್ಸು 54 ವರ್ಷವಾಗಿದ್ದರೆ, ಬ್ರಿಗೇಡಿಯರ್ ಹುದ್ದೆಯಲ್ಲಿ 56 ವರ್ಷ ವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ.
17 ವರ್ಷಗಳ ಸುದೀರ್ಘ ವಿಚಾರಣೆಯಿಂದ ತನ್ನ ವೃತ್ತಿ ಜೀವನದ ಪ್ರಗತಿಗೆ ತೊಂದರೆ ಉಂಟಾಗಿದೆ ಎಂದು ಪುರೋಹಿತ್ ಸಶಸ್ತ್ರ ಪಡೆಗಳ ನ್ಯಾಯಾಧಿಕರಣದ ಮೊರೆ ಹೋಗಿದ್ದರು. 2017ರಲ್ಲಿ ಅವರಿಗೆ ಜಾಮೀನು ಮಂಜೂರಾದರೂ, ಶಿಸ್ತು ಮತ್ತು ನಿಯಂತ್ರಣದ ಅಡಿಯಲ್ಲಿ ಇರಿಸಲಾಗಿತ್ತು. ಜುಲೈ 2020ರಲ್ಲಿ ಈ ನಿರ್ಬಂಧ ತೆರವುಗೊಳ್ಳುತ್ತಿದ್ದಂತೆ, 2021ರಲ್ಲಿ ಭಡ್ತಿ ಪ್ರಕ್ರಿಯೆ ಮುಂದುವರಿಯಿತು.
ಹೇಮಂತ್ ಕರ್ಕರೆ ಕುರಿತು ವಿವಾದಾತ್ಮಕ ಹೇಳಿಕೆಗಳು ಹೊಸದಲ್ಲ. ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಹುತಾತ್ಮ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದನ್ನು ಯೂಟ್ಯೂಬರ್ ಧ್ರುವ್ ರಾಠಿ ಗಮನಕ್ಕೆ ತಂದಿದ್ದರು.
1982ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ, ಮುಂಬೈ ಎಟಿಎಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ನೇತೃತ್ವ ವಹಿಸಿದ್ದರು. 2008ರ ನವೆಂಬರ್ 26ರಂದು ನಡೆದ ಮುಂಬೈ ಉಗ್ರ ದಾಳಿಯ ವೇಳೆ ಕಾಮಾ ಆಸ್ಪತ್ರೆ ಬಳಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಅವರು ಹುತಾತ್ಮರಾದರು. ಅವರಿಗೆ 2009ರಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಲಾಗಿದೆ.
ಮುಂಬೈ ಪೊಲೀಸರ ಆರೋಪಪಟ್ಟಿಯ ಪ್ರಕಾರ, ಅಜ್ಮಲ್ ಅಮೀರ್ ಕಸಬ್ ಹಾಗೂ ಅಬು ಇಸ್ಮಾಯಿಲ್ ಖಾನ್ ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ಕರೆ ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಹಾಗೂ ಇನ್ಸ್ಪೆಕ್ಟರ್ ವಿಜಯ್ ಸಲಸ್ಕರ್ ಮೃತಪಟ್ಟಿದ್ದರು. ಕಾಮಾ ಆಸ್ಪತ್ರೆಗೆ ತೆರಳುವಾಗ ರಂಗ್ ಭವನ್ ಲೇನ್ ಬಳಿ ಹೊಂಚು ಹಾಕಿ ದಾಳಿ ನಡೆಸಲಾಗಿತ್ತು.
ಇದೇ ವಿಚಾರದಲ್ಲಿ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಈ ಹಿಂದೆ “ಶಾಪದ ಪರಿಣಾಮ” ಎಂದು ಹೇಳಿಕೆ ನೀಡಿದ್ದರೆ, ಮಹಾರಾಷ್ಟ್ರ ವಿಪಕ್ಷ ನಾಯಕ ವಿಜಯ್ ವಡೆಟ್ಟಿವಾರ್ ಅವರು “RSS ಸಂಪರ್ಕ ಹೊಂದಿದ್ದ ಪೊಲೀಸ್ ಅಧಿಕಾರಿ ಕರ್ಕರೆ ಸಾವಿಗೆ ಕಾರಣ” ಎಂದು ಆರೋಪಿಸಿದ್ದರು.







