ವಿನಾಶದ ಅಂಚಿನಿಂದ ಬದುಕುಳಿದ ಪ್ರಾಣಿ-ಪಕ್ಷಿಗಳ ವಿವರ ಇಲ್ಲಿದೆ…

Photo Credit : PTI
ಒಮ್ಮೆ ನಶಿಸಿ ಹೋಗಿರುವ ಪಟ್ಟಿಯಲ್ಲಿದ್ದ ಅನೇಕ ಪ್ರಭೇದಗಳನ್ನು ಉಳಿಸಿಕೊಳ್ಳಲಾಗಿದೆ. ಅಂತಹ ಐದು ಅಭೂತಪೂರ್ವ ವನ್ಯಜೀವಿಗಳ ರಕ್ಷಣೆಯ ವಿವರ ಇಲ್ಲಿದೆ.
ಭಾರತದ ವನ್ಯಜೀವಿಗಳ ಕತೆಯಲ್ಲಿ ಸದಾ ನಷ್ಟವೇ ಬರೆದಿರಬೇಕು ಎಂದೇನಿಲ್ಲ. ಜಾಗತಿಕವಾಗಿ ಅತಿ ಯಶಸ್ವೀ ಸಂರಕ್ಷಣಾ ಪ್ರಯತ್ನಗಳಿಗೂ ಭಾರತ ಪ್ರಸಿದ್ಧಿ ಪಡೆದಿದೆ. ಸರ್ಕಾರಗಳ ಕ್ರಮ, ಸಮುದಾಯದ ಬೆಂಬಲ, ಆವಾಸಸ್ಥಾನಗಳ ರಕ್ಷಣೆ ಮತ್ತು ವೈಜ್ಞಾನಿಕವಾಗಿ ನಿರ್ವಹಣೆಯ ಮೂಲಕ ಒಮ್ಮೆ ನಶಿಸಿ ಹೋಗಿರುವ ಪಟ್ಟಿಯಲ್ಲಿದ್ದ ಅನೇಕ ಪ್ರಭೇದಗಳನ್ನು ಉಳಿಸಿಕೊಳ್ಳಲಾಗಿದೆ. ಅಂತಹ ಐದು ಅಭೂತಪೂರ್ವ ವನ್ಯಜೀವಿಗಳ ರಕ್ಷಣೆಯ ವಿವರ ಇಲ್ಲಿದೆ.
ವಿನಾಶದ ಅಂಚಿನಲ್ಲಿದ್ದ ಏಷ್ಯಾಟಿಕ್ ಸಿಂಹಗಳು
Photo Credit : Wikipedia
ಗುಜರಾತ್ನ ಗಿರ್ ಅರಣ್ಯದಲ್ಲಿ ಮಾತ್ರ ನೆಲೆಸಿದ್ದ ಏಷ್ಯಾಟಿಕ್ ಸಿಂಹಗಳು 19ನೇ ಶತಮಾನದಲ್ಲಿ ವಿನಾಶದ ಅಂಚಿಗೆ ತಲುಪಿದ್ದು, 20 ಸಿಂಹಗಳು ಮಾತ್ರ ಉಳಿದಿದ್ದವು. ಜುನಾಗಢ್ನ ನವಾಬ್ ಮಧ್ಯಪ್ರವೇಶಿಸಿದ ಮೇಲೆ, ಸಿಂಹ ಯೋಜನೆ ಕೈಗೊಂಡು ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂತು. ಇಂದು ಗಿರ್ ಅರಣ್ಯ ಪರಿಸರದಲ್ಲಿ 670 ಏಷ್ಯಾಟಿಕ್ ಸಿಂಹಗಳಿವೆ. ಇದೀಗ ಅವುಗಳ ಆವಾಸಸ್ಥಾನಗಳು ಕೇಂದ್ರ ಅರಣ್ಯವನ್ನು ಮೀರಿ ವಿಸ್ತರಿಸುತ್ತಿವೆ. ನಿಯಮಿತ ಮೇಲ್ವಿಚಾರಣೆ, ಪಶುವೈದ್ಯಕೀಯ ಆರೈಕೆ ಮತ್ತು ಸಮುದಾಯ ಸಹಭಾಗಿತ್ವಗಳು ಅವುಗಳ ಭವಿಷ್ಯವನ್ನು ರಕ್ಷಿಸಲು ಮುಂದಾಗಿವೆ.
ಒಂದು ಕೊಂಬಿನ ಘೇಂಡಾಮೃಗ
Photo Credit: Wikipedia
ಅಸ್ಸಾಂನ ಹೆಮ್ಮೆಯ ಪ್ರಾಣಿಯಾಗಿರುವ ಒಂದು ಕೊಂಬಿನ ಘೇಂಡಾಮೃಗ ಅಥವಾ ಖಡ್ಗಮೃಗ 1905ರಲ್ಲಿ 75ರ ಸಂಖ್ಯೆಗೆ ಇಳಿದು ಅಳಿವಿನಂಚಿಗೆ ಹೋಗಿತ್ತು. ಕಾಜಿರಂಗಾ ರಾಷ್ಟ್ರೀಯ ಅಭಯಾರಣ್ಯದ ನಿರ್ಮಾಣ ಮತ್ತು ಬೇಟೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡ ಮೇಲೆ ದೊಡ್ಡ ಬದಲಾವಣೆ ಕಂಡುಬಂತು. ಇಂದು ಕಾಜಿರಂಗದಲ್ಲಿ 2,400 ಖಡ್ಗಮೃಗಗಳಿವೆ. ಜಾಗತಿಕವಾಗಿ ಒಂದೇ ಪ್ರದೇಶದ ಅತ್ಯಧಿಕ ಸಂಖ್ಯೆಯ ಖಡ್ಗಮೃಗಗಳು ಇಲ್ಲಿವೆ. ಇದಿಈಗ ಅಸ್ಸಾಂನ ಇತರ ಸಂರಕ್ಷಣಾ ಪ್ರದೇಶಗಳಾದ ಪೊಬಿಟೋರ, ಆರಂಗ್ ಮತ್ತು ಮಾನಸ್ಗಳಿಗೆ ಒಂದು ಕೊಂಬಿನ ಖಡ್ಗಮೃಗಗಳ ಆವಾಸಸ್ಥಾನವನ್ನು ವಿಸ್ತರಿಸಲಾಗಿದೆ.
ಅಮುರ್ ಗಿಡುಗ
Photo Credit: Wikipedia
ಹಿಂಸ್ರ ಪಕ್ಷಿಗಳ ಸಾಲಿಗೆ ಸೇರುವ ಅಮುರ್ ಗಿಡುಗದ ರಕ್ಷಣೆ ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಅತ್ಯುತ್ತಮ ಸಂರಕ್ಷಣಾ ಕತೆ. ಪ್ರತಿ ವರ್ಷ ನಾಗಾಲ್ಯಾಂಡ್ಗೆ ಲಕ್ಷಾಂತರ ಅಮುರ್ ಗಿಡುಗಗಳು ಹಾದು ಬರುತ್ತವೆ. ಆದರೆ ದಶಕಗಳ ಹಿಂದೆ ವಲಸೆ ಪಕ್ಷಿಗಳ ಸಾಮೂಹಿಕ ಬೇಟೆಯಿಂದಾಗಿ ಅವುಗಳ ಉಳಿವಿಗೆ ಕಂಟಕ ಬಂದಿತ್ತು. 2012ರಲ್ಲಿ ಸಾಮುದಾಯಿಕ ಒಪ್ಪಂದಗಳು, ಕಠಿಣ ಶಿಕ್ಷೆ, ಜಾಗೃತಿ ಅಭಿಯಾನದ ಮೂಲಕ ತ್ವರಿತ ಕ್ರಮ ಕೈಗೊಳ್ಳಲಾಯಿತು.
ಗ್ರಾಮಸ್ಥರೇ ರಕ್ಷಕರಾದರು. ಪಕ್ಷಿಗಳಿಗೆ ಸುರಕ್ಷಿತ ಸಂತಾನೋತ್ಪತ್ತಿ ಜಾಗಗಳನ್ನು ಸೃಷ್ಟಿಸಿದರು. ಇಂದು ನಾಗಾಲ್ಯಾಂಡ್ ಜಗತ್ತಿನ ಅಮುರ್ ಗಿಡುಗದ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಬೇಟೆಯ ವರದಿಯೂ ಆಗಿಲ್ಲ.
ಆಲಿವ್ ರಿಡ್ಲೇ ಆಮೆ
Photo Credit: Wikipedia
ಒಡಿಶಾದ ಕರಾವಳಿಯಲ್ಲಿ ಮುಖ್ಯವಾಗಿ ಗಾಹಿರ್ಮಾತ ಮತ್ತು ರುಶಿಕುಲ್ಯ ಕಡಲ ತೀರಗಳು ಜಗತ್ತಿನಲ್ಲೇ ಆಲಿವ್ ರಿಡ್ಲೇ ಆಮೆಗಳ ಸಾಮೂಹಿಕ ಸಂತಾನೋತ್ಪತ್ತಿ ಜಾಗಗಳಾಗಿವೆ. 1980 ಮತ್ತು 1990ರಲ್ಲಿ ಮೊಟ್ಟೆ ಕದಿಯುವ ಪ್ರವೃತ್ತಿಯಿಂದ ಇದರ ಸಂತತಿ ವಿನಾಶದಂಚಿಗೆ ತಲುಪಿತ್ತು.
ಸಾಗರ ವಲಯದ ರಕ್ಷಣೆ, ಕೆಲವು ಋತುವಿನಲ್ಲಿ ಮಾತ್ರ ಮೀನುಗಾರಿಕೆ ನಿಷೇಧ, ಆಮೆ ಪ್ರತ್ಯೇಕ ವಲಯಗಳು ಮತ್ತು ಸಮುದಾಯಗಳು ಕಡಲತೀರದ ಕಾವಲು ನಿಂತಿರುವುದು ಮೊದಲಾದ ಕಾರಣಗಳಿಂದ ಲಕ್ಷಾಂತರ ಆಮೆಗಳು ವಾರ್ಷಿಕವಾಗಿ ಇಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇದೀಗ ಈ ಪ್ರದೇಶ ಜಾಗತಿಕವಾಗಿ ಆಲಿವ್ ರಿಡ್ಲೇಗಳ ಅತಿ ದೊಡ್ಡ ಆವಾಸಸ್ಥಾನವಾಗಿದೆ.
ಬರಸಿಂಘ
Photo Credit: Wikipedia
ಮಧ್ಯಪ್ರದೇಶದ ಪ್ರಾಣಿಯಾಗಿರುವ ಬರಸಿಂಘಗಳು ಒಂದು ಕಾಲದಲ್ಲಿ ಅಳಿವಿನಂಚಿಗೆ ತಲುಪಿದ್ದವು. 1960ರಲ್ಲಿ ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ 60 ಬರಸಿಂಘಗಳು ಮಾತ್ರ ಉಳಿದಿದ್ದವು. ಆವಾಸಸ್ಥಾನದ ರಕ್ಷಣೆ, ಭೇಟೆಗೆ ತಡೆಯೊಡ್ಡಿರುವುದು, ಪ್ರಭೇದಗಳನ್ನು ಜಾಗರೂಕವಾಗಿ ಸಂರಕ್ಷಿಸಿರುವುದು ಅವುಗಳ ಸಂಖ್ಯೆ 800ಕ್ಕೆ ಏರಲು ಕಾರಣವಾಗಿದೆ. ಇದೀಗ ಸತ್ಪುರ ಮತ್ತು ಇತರ ಪ್ರದೇಶಗಳಿಗೂ ಅವುಗಳನ್ನು ವಿಸ್ತರಿಸುವ ಕೆಲಸವಾಗುತ್ತಿದೆ.
ಕೃಪೆ: indianexpress.com







