ಗುಜರಾತ್ ಗಲಭೆ ಪ್ರಕರಣ: ಮಾಜಿ ಡಿಜಿಪಿ ಶ್ರೀಕುಮಾರ್ಗೆ ಜಾಮೀನು

ಆರ್ ಬಿ ಶ್ರೀಕುಮಾರ್ (telegraphindia.com)
ಹೊಸದಿಲ್ಲಿ: ಗುಜರಾತ್ನಲ್ಲಿ 2002 ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿ ಸಹಿತ ಉನ್ನತ ಸ್ಥಾನಗಳಲ್ಲಿರುವವರನ್ನು ಸಿಲುಕಿಸಲು ದಾಖಲೆಗಳನ್ನು ತಿರುಚಿದ ಆರೋಪದ ಮೇಲೆ ಕಳೆದ ವರ್ಷ ಬಂಧಿತರಾಗಿದ್ದ ರಾಜ್ಯದ ಮಾಜಿ ಡಿಜಿಪಿ ಆರ್ ಬಿ ಶ್ರೀಕುಮಾರ್ ಅವರಿಗೆ ಗುಜರಾತ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರುಗೊಳಿಸಿದೆ.
ಶ್ರೀಕುಮಾರ್ ಅವರಿಗೆ ಸೆಪ್ಟೆಂಬರ್ 28ರಂದೇ ಮಧ್ಯಂತರ ಜಾಮೀನು ಒದಗಿಸಲಾಗಿತ್ತು. ಶುಕ್ರವಾರ ಅಂತಿಮ ವಿಚಾರಣೆ ನಡೆದು ಅವರಿಗೆ ಜಾಮೀನು ದೊರಕಿದೆ.
ಇಡೀ ಪ್ರಕರಣವು ದಾಖಲೆಗಳ ಸಾಕ್ಷ್ಯವನ್ನಾಧರಿಸಿದೆ ಮತ್ತು ಪ್ರಸಕ್ತ ಅದು ತನಿಖಾ ಏಜನ್ಸಿಯ ವಶದಲ್ಲಿದೆ, ಅರ್ಜಿದಾರರಿಗೆ 75 ವರ್ಷ ವಯಸ್ಸಾಗಿದ್ದು ವಯೋ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದಾರೆ, ಅವರು ಮಧ್ಯಂತರ ಜಾಮೀನು ಅವಧಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಲ್ಲ ಮತ್ತು ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಅವರಿಗೆ ಜುಲೈ 19ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ ಎಂಬ ಅಂಶಗಳನ್ನು ಪರಿಗಣಿಸಿ ಶ್ರೀಕುಮಾರ್ ಅವರಿಗೆ ಜಾಮೀನು ನೀಡಲಾಗಿದೆ.
ವಿಚಾರಣಾ ನ್ಯಾಯಾಲಯದ ಮುಂದೆ ಆಗಸ್ಟ್ 17ರಂದು ಹಾಜರಾಗಿ ವೈಯಕ್ತಿಕ ಬಾಂಡ್ ಮೊತ್ತವಾಗಿ ರೂ. 25,000 ಪಾವತಿಸುವಂತೆ ನ್ಯಾಯಾಲಯ ಶ್ರೀಕುಮಾರ್ ಅವರಿಗೆ ಸೂಚಿಸಿದೆ.
ಶ್ರೀಕುಮಾರ್ ಅವರನ್ನು ಕಳೆದ ವರ್ಷದ ಜೂನ್ 25ರಂದು ತೀಸ್ತಾ ಸೆಟಲ್ವಾಡ್ ಅವರ ಜೊತೆಗೆ ಗುಜರಾತ್ ಎಟಿಎಸ್ ಬಂಧಿಸಿತ್ತು.
ಗುಜರಾತ್ ಗಲಭೆಗಳಲ್ಲಿ ದೊಡ್ಡ ಮಟ್ಟದ ಸಂಚಿತ್ತು ಎಂದು ಆರೋಪಿಸಿ ಝಾಕಿಯಾ ಎಹ್ಸಾನ್ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಬಂಧನ ನಡೆದಿತ್ತು.







