ಹಿಮಾಚಲ ಪ್ರದೇಶ | ಕಸ್ಟಡಿ ಸಾವು ಪ್ರಕರಣ: ಐಜಿಪಿ ಸಹಿತ 7 ಮಂದಿ ದೋಷಿಗಳು

PC: freepik
ಚಂಡೀಗಢ: ಹಿಮಾಚಲ ಪ್ರದೇಶದ ಕೊತ್ಖಾಯಿ ಲಾಕಪ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಝಹೂರ್ ಹೈದರ್ ಝಿಯಾದಿ ಮತ್ತು ಇತರ ಏಳು ಮಂದಿ ಪೊಲೀಸ್ ಅಧಿಕಾರಿಗಳನ್ನು ಇಲ್ಲಿನ ವಿಶೇಷ ಸಿಬಿಐ ಕೋರ್ಟ್ ದೋಷಿಗಳು ಎಂದು ಪ್ರಕಟಿಸಿದೆ. ಆದರೆ ಸಾಕ್ಷ್ಯಗಳ ಕೊರತೆ ಆಧಾರದಲ್ಲಿ ಎಸ್ಪಿ ದಂಡು ವಂಗ್ಯಾಲ್ ನೇಗಿ ಅವನ್ನು ದೋಷಮುಕ್ತಗೊಳಿಸಿದೆ. ದೋಷಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಜನವರಿ 27ರಂದು ನ್ಯಾಯಾಲಯ ಪ್ರಕಟಿಸಲಿದೆ.
ಶಿಕ್ಷೆಗೆ ಗುರಿಯಾಗಿರುವ ಇತರ ಅಧಿಕಾರಿಗಳೆಂದರೆ ಡಿಎಸ್ಪಿ ಮನೋಜ್ ಜೋಶಿ, ಕೊತ್ಖಾಯಿ ಠಾಣೆಯ ಠಾಣಾಧಿಕಾರಿಯಾಗಿದ್ದ ರಾಜೀಂದರ್ ಸಿಂಗ್, ಎಎಸ್ಐ ದೀಪ್ ಚಂದ್ ಶರ್ಮಾ, ಮುಖ್ಯ ಪೇದೆಗಳಾದ ಮೋಹನ್ ಲಾಲ್, ಸೂರತ್ ಸಿಂಗ್, ರಫಿ ಮೊಹ್ಮದ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಗಳಾದ ರಂಜೀತ್ ಸತೇತಾ.
ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ಎಲ್ಲ ಶಿಕ್ಷಿತರನ್ನು ವಶಕ್ಕೆ ಪಡೆಯಲಾಗಿದ್ದು, ಶಿಕ್ಷೆ ಘೋಷಿಸುವ ದಿನ ಮುಂಜಾನೆ 10 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. 2017ರಲ್ಲಿ 16ರ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿ ಸೂರಜ್ ಎಂಬಾತ ಲಾಕಪ್ ನಲ್ಲಿ ಮೃತಪಟ್ಟಿದ್ದ ಪ್ರಕರಣ ಇದಾಗಿದೆ. 2019ರ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಹಿಮಾಚಲ ಪ್ರದೇಶ ನ್ಯಾಯಾಲಯದಿಂದ ಚಂಡೀಗಢ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 120ಎ (ಅಪರಾಧ ಪಿತೂರಿ), 302 (ಹತ್ಯೆ), 330 (ತಪ್ಪೊಪ್ಪಿಗೆಗಾಗಿ ಗಾಯಗೊಳಿಸುವುದು), 348 (ಅಕ್ರಮ ಬಂಧನ), 195 (ಸುಳ್ಳು ಸಾಕ್ಷಿಗಳನ್ನು ಹೊಂದಿಸುವುದು), 196 (ಸುಳ್ಳು ಪುರಾವೆ ಬಳಸುವುದು), 218 (ದಾಖಲೆ ವಿರೂಪಗೊಳಿಸುವುದು) ಮತ್ತು 201 (ದಾಖಲೆ ನಾಶ) ಅಡಿಯಲ್ಲಿ ಆರೋಪಿಗಳನ್ನು ದೋಷಿಗಳೆಂದು ನಿರ್ಧರಿಸಲಾಗಿದೆ.
ಶಿಮ್ಲಾದ ಕೊತ್ಖಾಯಿ ಅರಣ್ಯದಲ್ಲಿ 10ನೇ ತರಗತಿಯ ಬಾಲಕಿಯ ಶವ 2017ರ ಜುಲೈ 4ರಂದು ಆಕೆ ನಾಪತ್ತೆಯಾದ ಎರಡು ದಿನಗಳ ಬಳಿಕ ಪತ್ತೆಯಾಗಿತ್ತು. ಐಜಿ ಝಿಯಾದಿ ನೇತೃತ್ವದ ವಿಶೇಷ ತನಿಖಾ ತಂಡ ಸೂರಜ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿತ್ತು.







