ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ: ರಾಹುಲ್ ಗಾಂಧಿ

ಹಿಮಂತ ಬಿಸ್ವಾ ಶರ್ಮಾ, ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ ಪತ್ನಿ ರಿನಿಕಿ ಭೂಯನ್ ಶರ್ಮಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂಬುದಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬಣ್ಣಿಸಿರುವ ರಾಹುಲ್, ಅವರು ರಾಜಕೀಯ ಎದುರಾಳಿಗಳ ವಿರುದ್ಧ ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡುತ್ತಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮಾಡಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ ಅವರು, ‘‘ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಕಾನೂನಿನ ಆಡಳಿತ ನಮ್ಮ ಸಂವಿಧಾನದ ಪ್ರಾಥಮಿಕ ತತ್ವಗಳಾಗಿವೆ’’ ಎಂದರು. ಪಕ್ಷವು ಖೇರಾ ಪರವಾಗಿ ದೃಢವಾಗಿ ನಿಂತಿದೆ ಎಂದು ಘೋಷಿಸಿದ ಅವರು, ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.
ಎಪ್ರಿಲ್ 10ರಿಂದ ಒಂದು ವಾರದ ಕಾಲ ಪವನ್ ಖೇರಾಗೆ ತೆಲಂಗಾಣ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಮುಂದಿನ ಪರಿಹಾರಕ್ಕಾಗಿ ಅಸ್ಸಾಮ್ನ ಸೂಕ್ತ ನ್ಯಾಯಾಲಯಕ್ಕೆ ಹೋಗುವಂತೆ ತೆಲಂಗಾಣ ಹೈಕೋರ್ಟ್ ಅವರಿಗೆ ನಿರ್ದೇಶನ ನೀಡಿತ್ತು.
ಭೂಯನ್ ಶರ್ಮಾ ಹಲವಾರು ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಹಾಗೂ ಅವರ ಕುಟುಂಬವು ಅಮೆರಿಕದಲ್ಲಿ 52,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂಬುದಾಗಿ ಖೇರಾ ಆರೋಪಿಸಿದ್ದಾರೆ.
ಈ ಆರೋಪದ ಬಳಿಕ, ಭೂಯನ್ ಶರ್ಮಾ ನೀಡಿದ ದೂರಿನ ಆಧಾರದಲ್ಲಿ ಅಸ್ಸಾಂ ಪೊಲೀಸರು ಖೇರಾ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಅವರ ನಿವಾಸದಲ್ಲಿ ಶೋಧ ನಡೆಸಿದ್ದರು.






