ಅದಾನಿ ವರದಿಗೆ ಬದ್ಧ, ಸಂಸ್ಥೆ ಮುಚ್ಚಲು ಯಾವುದೇ ಒತ್ತಡವಿರಲಿಲ್ಲ: ಹಿಂಡನ್ಬರ್ಗ್ ಮುಖ್ಯಸ್ಥ ಆ್ಯಂಡರ್ಸನ್

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ಮುಖ್ಯಸ್ಥ ನಥಾನ್ ಆ್ಯಂಡರ್ಸನ್ (Photo:X)
ಹೊಸದಿಲ್ಲಿ: ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯನ್ನು ಮುಚ್ಚಲು ನನ್ನ ಮೇಲೆ ಕಾನೂನಾತ್ಮಕ ಅಥವಾ ಇನ್ನಾವುದೇ ಬಗೆಯ ಒತ್ತಡವಿರಲಿಲ್ಲ ಹಾಗೂ ನಾನು ಅದಾನಿ ವರದಿಗೆ ಬದ್ಧವಾಗಿದ್ದೇನೆ ಎಂದು ಅದಾನಿ ಸಮೂಹದ ವಿರುದ್ಧ ಶೇರು ಮೌಲ್ಯ ತಿರುಚುವಿಕೆಯ ಸ್ಫೋಟಕ ಆರೋಪ ಮಾಡಿದ್ದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ಮುಖ್ಯಸ್ಥ ನಥಾನ್ ಆ್ಯಂಡರ್ಸನ್ ಸ್ಪಷ್ಟಪಡಿಸಿದ್ದಾರೆ.
PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ನಥಾನ್ ಆ್ಯಂಡರ್ಸನ್, ಅದಾನಿ ಸಮೂಹದ ವಿರುದ್ಧ ಮಾಧ್ಯಮ ವರದಿಗಳು ಎಚ್ಚರಿಕೆ ನೀಡಿದ ಪ್ರತಿಫಲವಾಗಿ ಕಾರ್ಪೊರೇಟ್ ಇತಿಹಾಸದಲ್ಲೇ ಬೃಹತ್ ವಂಚನೆಯಾದ ಅದಾನಿ ಸಮೂಹ ಶೇರು ಮೌಲ್ಯ ತಿರುಚುವಿಕೆ ಆರೋಪದ ವರದಿಯನ್ನು ಜನವರಿ 2023ರಲ್ಲಿ ಹಿಂಡನ್ಬರ್ಗ್ ಪ್ರಕಟಿಸಿತು ಎಂದು ತಿಳಿಸಿದ್ದಾರೆ. ಆದರೆ, ವರದಿಯಲ್ಲಿನ ಎಲ್ಲ ಆರೋಪಗಳನ್ನು ಅದಾನಿ ಸಮೂಹ ಅಲ್ಲಗಳೆದಿತ್ತು.
ಒಸಿಸಿಆರ್ಪಿ ಹಾಗೂ ಜಾರ್ಜ್ ಸೊರೊಸ್ ರೊಂದಿಗೆ ಹಿಂಡನ್ಬರ್ಗ್ ಗೆ ಸಂಬಂಧ ಕಲ್ಪಿಸುವ ಪ್ರಯತ್ನಗಳನ್ನು ಅವಿವೇಕದ ಪಿತೂರಿ ಎಂದು ಬಣ್ಣಿಸಿರುವ ಆ್ಯಂಡರ್ಸನ್, ನಮ್ಮ ಸಂಸ್ಥೆಯು ಕ್ಷುಲ್ಲಕ ಪಿತೂರಿ ಸೂತ್ರಗಳಿಗೆ ಆಹಾರ ಒದಗಿಸಬಾರದು ಎಂಬ ನೀತಿಯನ್ನು ಅನುಸರಿಸುತ್ತಿರುವುದರಿಂದ, ನಮ್ಮ ಸಂಸ್ಥೆಯು ಅವರ ಕುರಿತು ಎಂದೂ ಪ್ರತಿಕ್ರಿಯಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ವಂಚನೆ ನಡೆಸುತ್ತಿವೆ ಎಂದು ತಾವು ಆರೋಪಿಸಿದ ಕಂಪನಿಗಳ ವಿರುದ್ಧ ಸೂಕ್ಷ್ಮವಾದ ವಿಸ್ತೃತ ವರದಿಗಳನ್ನು ಪ್ರಕಟಿಸುವುದಕ್ಕೆ ಹೆಸರುವಾಸಿಯಾಗಿರುವ ಆ್ಯಂಡರ್ಸನ್, ಎಂಟು ವರ್ಷಗಳ ಹಿಂದೆ ತಾವು ಸ್ಥಾಪಿಸಿದ್ದ ವಿಧಿವಿಜ್ಞಾನ ಸಂಶೋಧನಾ ಸಂಸ್ಥೆಯಾದ ಹಿಂಡನ್ಬರ್ಗ್ ಸಂಸ್ಥೆಯನ್ನು ಮುಚ್ಚುವುದಾಗಿ ಕಳೆದ ತಿಂಗಳು ಪ್ರಕಟಿಸಿದ್ದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ► https://whatsapp.com/channel/0029VaA8ju86LwHn9OQpEq28