ಆಂಧ್ರಪ್ರದೇಶದಲ್ಲಿ ಫ್ಲಾರ್ ಮಾಸ್ಟರ್ಸ್ ನ ಮೊದಲ ವಿದೇಶಿ ಉತ್ಪಾದನಾ ಘಟಕ; HMH ಗ್ರೂಪ್ ನಿಂದ 100 ಕೋಟಿ ರೂ. ಹೂಡಿಕೆ

ವಿಜಯವಾಡ: ಯುಎಇ ಮೂಲದ ಫ್ಲಾಟ್ ಬ್ರೆಡ್ ತಯಾರಿಕಾ ಸಂಸ್ಥೆ ಫ್ಲಾರ್ ಮಾಸ್ಟರ್ಸ್ ಆಂಧ್ರಪ್ರದೇಶದಲ್ಲಿ 100 ಕೋಟಿ ರೂ. ಹೂಡಿಕೆಯಲ್ಲಿ ತನ್ನ ಮೊದಲ ವಿದೇಶಿ ಉತ್ಪಾದನಾ ಘಟಕ ಸ್ಥಾಪಿಸಲಿದೆ. ಭಾರತೀಯ ಹಾಗೂ ವಿದೇಶಿ ಮಾರುಕಟ್ಟೆಗಳಿಗೆ ಫ್ಲಾಟ್ ಬ್ರೆಡ್ ಉತ್ಪನ್ನಗಳನ್ನು ಪೂರೈಸುವ ಈ ಘಟಕದಲ್ಲಿ ಹಿಟ್ಟು ಮಿಲ್ಲಿಂಗ್, ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನ ಅಭಿವೃದ್ಧಿ ಹಾಗೂ ರಫ್ತು ಸೌಲಭ್ಯಗಳು ಒಂದೇ ಕ್ಯಾಂಪಸ್ ನಲ್ಲಿ ಇರಲಿವೆ.
ಬಂಟ್ವಾಳದ ಅನಿವಾಸಿ ಭಾರತೀಯ ಉದ್ಯಮಿ ಹನಿ ಎಂ ಹನೀಫ್ ಈ ಸಂಸ್ಥೆಯ ಸ್ಥಾಪಕ ಹಾಗೂ ಅವರ ಪತ್ನಿ ಪುತ್ತೂರಿನ ಶಹನಾಜ್ ಹನೀಫ್ ಇದರ ಸಹ ಸ್ಥಾಪಕಿಯಾಗಿದ್ದಾರೆ.
ಜು. 21ರಂದು ವಿಜಯವಾಡದಲ್ಲಿ ನಡೆದ ಆಂಧ್ರಪ್ರದೇಶ–ಯುಎಇ ಆಹಾರ ಕ್ಲಸ್ಟರ್ ಕುರಿತ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಯಿತು. ಈ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ಯುಎಇ ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ಟೌಕ್ ಅಲ್ ಮರ್ರಿೂ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಕೈಗಾರಿಕಾ ಸಚಿವ ಟಿ.ಜಿ. ಭರತ್, ಮುಖ್ಯ ಕಾರ್ಯದರ್ಶಿ ಜಿ. ಸಾಯಿ ಪ್ರಸಾದ್, ಯುಎಇ ಆಹಾರ ಮತ್ತು ಪಾನೀಯಗಳ ವ್ಯಾಪಾರ ಸಮೂಹದ ಅಧ್ಯಕ್ಷ ಸಲೇಹ್ ಅಬ್ದುಲ್ಲಾ ಲೂಟಾ, ಆರ್ಥಿಕ ನೀತಿಗಳು ಮತ್ತು ಅಧ್ಯಯನಗಳ ಸಹಾಯಕ ಅಂಡರ್ ಸೆಕ್ರೆಟರಿ ಡಾ. ಮರಿಯಾ ಹನೀಫ್ ಅಲ್ ಖಾಸಿಮ್ ಸೇರಿದಂತೆ ಭಾರತ ಮತ್ತು ಯುಎಇ ಎರಡೂ ದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮ ವಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.
ಫ್ಲಾರ್ ಮಾಸ್ಟರ್ಸ್ ನ ಸ್ಥಾಪಕ, ಅಧ್ಯಕ್ಷ ಹಾಗೂ ಗ್ರೂಪ್ ಸಿಇಒ ಹನಿ ಎಂ. ಹನೀಫ್ ಅವರು ಭಾರತದ ಅತ್ಯಾಧುನಿಕ ಸಂಯೋಜಿತ ಫ್ಲಾಟ್ ಬ್ರೆಡ್ ಉತ್ಪಾದನಾ ಕ್ಯಾಂಪಸ್ ನಿರ್ಮಿಸುವ ಕಂಪೆನಿಯ ಯೋಜನೆಯನ್ನು ಅನಾವರಣಗೊಳಿಸಿದರು. ಪ್ರಸ್ತಾವಿತ ಘಟಕದಲ್ಲಿ ಹಿಟ್ಟಿನ ಗಿರಣಿ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಉತ್ಪನ್ನದ ಸಂಶೋಧನೆ, ಬೃಹತ್ ಪ್ರಮಾಣದ ಉತ್ಪಾದನೆ, ಸಿದ್ಧ ಆಹಾರಗಳ ತಯಾರಿಕೆ ಹಾಗೂ ರಫ್ತು ಕಾರ್ಯಾಚರಣೆಗಳನ್ನು ಒಂದೇ ವ್ಯವಸ್ಥೆಯಡಿ ಸಂಯೋಜಿಸಲಾಗುತ್ತದೆ.
ಮುಖ್ಯಮಂತ್ರಿ ಹಾಗೂ ಯುಎಇ ಸಚಿವರ ಸಮ್ಮುಖದಲ್ಲಿ ವೀಡಿಯೊ ಪ್ರಸ್ತುತಿಯ ಮೂಲಕ ಯೋಜನೆಯನ್ನು ವಿವರಿಸಿದ ಹನಿ ಎಂ. ಹನೀಫ್, ಈ ಹೂಡಿಕೆಯು ರೈತರು, ಉದ್ಯೋಗಿಗಳು, ಪೂರೈಕೆದಾರರು, ಗ್ರಾಹಕರು ಹಾಗೂ ದೇಶದ ಆರ್ಥಿಕತೆಗೆ ದೀರ್ಘಾವಧಿಯ ಮೌಲ್ಯ ಸೃಷ್ಟಿಸುವುದರ ಜೊತೆಗೆ ಭಾರತವನ್ನು ಫ್ಲಾಟ್ ಬ್ರೆಡ್ ಉತ್ಪಾದನೆ ಮತ್ತು ಸಂಶೋಧನೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಿದೆ ಎಂದು ಹೇಳಿದರು.
"ರೈತರು, ಉದ್ಯೋಗಿಗಳು, ಗ್ರಾಹಕರು, ವ್ಯಾಪಾರ ಪಾಲುದಾರರು ಹಾಗೂ ವಿಶಾಲ ಆರ್ಥಿಕತೆಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸುವ ವಿಶ್ವದರ್ಜೆಯ ಸಂಯೋಜಿತ ಫ್ಲಾಟ್ ಬ್ರೆಡ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ದೃಷ್ಟಿಕೋನವಾಗಿದೆ. ಅದೇ ವೇಳೆ ಭಾರತವನ್ನು ಫ್ಲಾಟ್ ಬ್ರೆಡ್ ಸಂಶೋಧನೆ ಮತ್ತು ಉತ್ಪಾದನಾ ಶ್ರೇಷ್ಠತೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವೂ ನಮ್ಮದಾಗಿದೆ" ಎಂದು ಅವರು ತಿಳಿಸಿದರು.
ಕಂಪೆನಿಯ ಮಾಹಿತಿ ಪ್ರಕಾರ, ಆಂಧ್ರಪ್ರದೇಶದಲ್ಲಿ 15 ಎಕರೆ ವಿಸ್ತೀರ್ಣದ ಗ್ರೀನ್ಫೀಲ್ಡ್ ಕ್ಯಾಂಪಸ್ನಲ್ಲಿ ಯೋಜನೆ ನಿರ್ಮಾಣವಾಗಲಿದೆ. ಅತ್ಯಾಧುನಿಕ ಸ್ವಯಂಚಾಲಿತ ಘಟಕದಲ್ಲಿ ಆರಂಭಿಕ ಹಂತದಲ್ಲಿ ಪ್ರತಿದಿನ ಸುಮಾರು 10 ಲಕ್ಷ ಫ್ಲಾಟ್ ಬ್ರೆಡ್ ಗಳನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಟೋರ್ಟಿಲ್ಲಾ ಸೇರಿದಂತೆ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಾದರಿಯ ಫ್ಲಾಟ್ ಬ್ರೆಡ್ ಗಳು ಸೇರಿವೆ. ಮುಂದಿನ ಹಂತಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಪ್ರತಿದಿನ 2 ಕೋಟಿ ಫ್ಲಾಟ್ ಬ್ರೆಡ್ ಗಳಿಗೆ ಹೆಚ್ಚಿಸಲು ಅಗತ್ಯ ಮೂಲಸೌಕರ್ಯವನ್ನು ರೂಪಿಸಲಾಗಿದೆ.
ಈ ಯೋಜನೆಯಿಂದ 500ಕ್ಕೂ ಹೆಚ್ಚು ಕೌಶಲ್ಯಪೂರ್ಣ ಮತ್ತು ಅರೆಕೌಶಲ್ಯಪೂರ್ಣ ಕಾರ್ಮಿಕರಿಗೆ ಉದ್ಯೋಗ ದೊರೆಯಲಿದೆ. ಇಂಜಿನಿಯರಿಂಗ್, ಕಾರ್ಯಾಚರಣೆ, ಗುಣಮಟ್ಟ ನಿಯಂತ್ರಣ, ಆಡಳಿತ ಹಾಗೂ ನಿರ್ವಹಣಾ ವಿಭಾಗಗಳಲ್ಲಿ 50ಕ್ಕೂ ಹೆಚ್ಚು ವೃತ್ತಿಪರ ಹುದ್ದೆಗಳು ಸೃಷ್ಟಿಯಾಗಲಿವೆ. ಅಲ್ಲದೆ, ಸ್ಥಳೀಯವಾಗಿ ಕಚ್ಚಾ ವಸ್ತುಗಳ ಸಂಗ್ರಹಣೆ ಮತ್ತು ಪೂರೈಕೆದಾರರ ಸಹಭಾಗಿತ್ವದಿಂದ ಕೃಷಿ, ಪ್ಯಾಕೇಜಿಂಗ್, ಲಾಜಿಸ್ಟಿಕ್ಸ್, ವಿತರಣೆ ಸೇರಿದಂತೆ ಸಂಬಂಧಿತ ವಲಯಗಳಲ್ಲೂ ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಕಂಪೆನಿ ತಿಳಿಸಿದೆ.
ಕ್ಯಾಂಪಸ್ನಲ್ಲೇ ಅತ್ಯಾಧುನಿಕ ಹಿಟ್ಟು ಮಿಲ್ಲಿಂಗ್ ಘಟಕವನ್ನೂ ಸ್ಥಾಪಿಸಲಾಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಸಂಗ್ರಹಣೆಯಿಂದ ಹಿಡಿದು ಹಿಟ್ಟು ಮಿಲ್ಲಿಂಗ್, ಉತ್ಪಾದನೆ ಮತ್ತು ವಿತರಣೆಯವರೆಗಿನ ಎಲ್ಲ ಪ್ರಕ್ರಿಯೆಗಳು ಒಂದೇ ಕ್ಯಾಂಪಸ್ನಲ್ಲಿ ನಡೆಯಲಿವೆ. ಒಟ್ಟು ಉತ್ಪಾದನೆಯಲ್ಲಿ ಶೇಕಡಾ 60ರಷ್ಟು ಭಾರತೀಯ ಮಾರುಕಟ್ಟೆಗೆ ಪೂರೈಕೆಯಾಗಲಿದ್ದು, ಉಳಿದ ಶೇಕಡಾ 40ರಷ್ಟು ಉತ್ಪನ್ನಗಳನ್ನು ಏಷ್ಯಾ, ದೂರದ ಪೂರ್ವ, ಆಫ್ರಿಕಾ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
ಮಂಗಳೂರಿನ ಅನಿವಾಸಿ ಭಾರತೀಯ ಉದ್ಯಮಿ ಹನಿ ಎಂ. ಹನೀಫ್ ಹಾಗೂ ಅವರ ಪತ್ನಿ, ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿ ಶಹನಾಝ್ ಹನೀಫ್ ಅವರು ಯುಎಇಯಲ್ಲಿ ಸ್ಥಾಪಿಸಿದ ಫ್ಲಾರ್ ಮಾಸ್ಟರ್ಸ್, ಮಧ್ಯಪ್ರಾಚ್ಯದ ಪ್ರಮುಖ ಟೋರ್ಟಿಲ್ಲಾ ಮತ್ತು ಫ್ಲಾಟ್ ಬ್ರೆಡ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಬಂಟ್ವಾಳದ ಎಸ್ವಿಎಸ್ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆದ ಹನಿ ಎಂ. ಹನೀಫ್, ಮಂಗಳೂರಿನ ಕಾಲೇಜ್ ಫಾರ್ ಲೀಡರ್ಶಿಪ್ ಅಂಡ್ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ (CLHRD) ನಲ್ಲಿ ಪದವಿ ಪಡೆದಿದ್ದಾರೆ.
ಪುತ್ತೂರಿನವರಾದ ಶಹನಾಝ್ ಹನೀಫ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದು, HMH ಗ್ರೂಪ್ನಡಿ ಕಾರ್ಯನಿರ್ವಹಿಸುವ ಎಲ್ಲ ಕಂಪೆನಿಗಳ ನಿರ್ದೇಶಕಿ ಹಾಗೂ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪತ್ನಿಯ ಕೊಡುಗೆಯನ್ನು ಉಲ್ಲೇಖಿಸಿದ ಹನಿ ಎಂ. ಹನೀಫ್, "ಜೀವನ ಸಂಗಾತಿಯಾಗಿಯೂ, ಉದ್ಯಮ ಪಾಲುದಾರೆಯಾಗಿಯೂ ಅವರು ವಹಿಸಿರುವ ಪಾತ್ರ ನನ್ನ ಉದ್ಯಮಶೀಲತಾ ಪಯಣವನ್ನು ಯಶಸ್ವಿಗೊಳಿಸುವಲ್ಲಿ ನಿರ್ಣಾಯಕವಾಗಿದೆ. ಅವರ ಬೆಂಬಲಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.
ಆಧುನಿಕ ಉತ್ಪಾದನಾ ಘಟಕದಿಂದ ಕಾರ್ಯನಿರ್ವಹಿಸುತ್ತಿರುವ ಫ್ಲಾರ್ ಮಾಸ್ಟರ್ಸ್ ತನ್ನ ಉತ್ಪನ್ನಗಳನ್ನು 25ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. 50ಕ್ಕೂ ಹೆಚ್ಚು ಖಾಸಗಿ ಲೇಬಲ್ ಬ್ರ್ಯಾಂಡ್ ಗಳಿಗೆ ಉತ್ಪಾದನೆ ಮಾಡುತ್ತಿರುವ ಸಂಸ್ಥೆ, ಚಿಲ್ಲರೆ ವ್ಯಾಪಾರ, ಆಹಾರ ಸೇವೆ ಹಾಗೂ ಕೈಗಾರಿಕಾ ವಲಯಗಳಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದೆ. ಅನೇಕ HORECA ನಿರ್ವಾಹಕರು ಹಾಗೂ ಆಹಾರ ಸೇವಾ ವಿತರಕರಿಗೆ ಒಪ್ಪಂದದ ಉತ್ಪಾದನಾ ಪಾಲುದಾರವಾಗಿಯೂ ಕಾರ್ಯನಿರ್ವಹಿಸುತ್ತಿದೆ.
ಕಂಪೆನಿಯು ISO 22000:2018 ಮತ್ತು ಹಲಾಲ್ ಪ್ರಮಾಣೀಕರಣಗಳನ್ನು ಪಡೆದಿದ್ದು, ಟೋರ್ಟಿಲ್ಲಾ ಇಂಡಸ್ಟ್ರಿ ಅಸೋಸಿಯೇಷನ್, ಅಮೆರಿಕನ್ ಬೇಕರ್ಸ್ ಅಸೋಸಿಯೇಷನ್ ಹಾಗೂ ಯುಎಇ ಆಹಾರ ಮತ್ತು ಪಾನೀಯ ತಯಾರಕರ ಗ್ರೂಪ್ ನ ಸದಸ್ಯತ್ವ ಹೊಂದಿದೆ. ಒಪ್ಪಂದದ ಉತ್ಪಾದನೆಯ ಜೊತೆಗೆ ತನ್ನದೇ ಆದ ಪ್ರೀಮಿಯಂ ಟೋರ್ಟಿಲ್ಲಾ ಮತ್ತು ಫ್ಲಾಟ್ ಬ್ರೆಡ್ ಬ್ರ್ಯಾಂಡ್ ಗಳನ್ನೂ ಮಧ್ಯಪ್ರಾಚ್ಯದಲ್ಲಿ ಮಾರುಕಟ್ಟೆಗಿಳಿಸಿದೆ.
ಆಂಧ್ರಪ್ರದೇಶದ ಯೋಜನೆಯನ್ನು ಕಂಪೆನಿಯ ಜಾಗತಿಕ ವಿಸ್ತರಣಾ ವಿಭಾಗವಾದ ಫ್ಲಾರ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಮುನ್ನಡೆಸಲಿದೆ. ವಿದೇಶಿ ಮಾರುಕಟ್ಟೆಗಳನ್ನು ಗುರುತಿಸುವುದು, ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಈ ವಿಭಾಗದ್ದಾಗಿದೆ. ದೀರ್ಘಾವಧಿಯ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿ 2045ರೊಳಗೆ ವಿಶ್ವದಾದ್ಯಂತ 100 ಫ್ಲಾಟ್ ಬ್ರೆಡ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಗುರಿ ಕಂಪೆನಿ ಹೊಂದಿದೆ.
ಉದ್ಯಮಿಯಾಗಿ ಹನಿ ಎಂ. ಹನೀಫ್ ಅವರ ಪಯಣ ಅಂತರರಾಷ್ಟ್ರೀಯ ಆಹಾರ ವಹಿವಾಟಿನಿಂದ ಆರಂಭವಾಯಿತು. 2013ರಲ್ಲಿ ಅವರು ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪೆನಿಯನ್ನು ಸ್ಥಾಪಿಸಿದ್ದು, ಇದೇ ಮುಂದೆ HMH ಗ್ರೂಪ್ಗೆ ಅಡಿಪಾಯವಾಯಿತು. ಪ್ರಸ್ತುತ HMH ಗ್ರೂಪ್ ವ್ಯಾಪ್ತಿಯಲ್ಲಿ ಫ್ಲೋರ್ ಮಾಸ್ಟರ್ಸ್, ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪೆನಿ, ಅಮೆರಿಕನ್ ಫನ್ ಫುಡ್ಸ್ ಕಂಪೆನಿ, HMH ಗ್ಲೋಬಲ್ ಬ್ರಾಂಡ್ಸ್ ಹಾಗೂ ಫೋರ್ M ರಿಸೋರ್ಸಸ್ ಸೇರಿದಂತೆ ಹಲವು ಸಂಸ್ಥೆಗಳು ಉತ್ಪಾದನೆ, ಬ್ರ್ಯಾಂಡ್ ನಿರ್ಮಾಣ, ವಿತರಣೆ ಮತ್ತು ಜಾಗತಿಕ ವ್ಯಾಪಾರ ವಿಸ್ತರಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಉದ್ಯಮ ವಲಯದಲ್ಲಿ 'ದಿ ಟೋರ್ಟಿಲ್ಲಾ ಮ್ಯಾನ್' ಎಂದೇ ಪರಿಚಿತರಾಗಿರುವ ಹನಿ ಎಂ. ಹನೀಫ್, ಜಾಗತಿಕ ಆಹಾರ ಉತ್ಪಾದನೆ, ಖಾಸಗಿ ಲೇಬಲ್ ಉತ್ಪಾದನೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಉದ್ಯಮವನ್ನು ಬೆಳೆಸಿದ್ದಾರೆ. ಆಂಧ್ರಪ್ರದೇಶದ ಹೊಸ ಯೋಜನೆಯ ಮೂಲಕ ಭಾರತವನ್ನು ಫ್ಲಾರ್ ಮಾಸ್ಟರ್ಸ್ನ ಜಾಗತಿಕ ಉತ್ಪಾದನಾ ನೆಲೆಯಾಗಿ ರೂಪಿಸುವುದರ ಜೊತೆಗೆ, ದೇಶದಲ್ಲಿ ಆಹಾರ ಸಂಸ್ಕರಣೆ, ರಫ್ತು ಮತ್ತು ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡುವ ಗುರಿ ಹೊಂದಿದ್ದಾರೆ.






