Keralam | ನಾಲ್ಕು ದಶಕಗಳ ಬಳಿಕ ಬಯಲಾಯ್ತು ಕೊಲೆ ಪ್ರಕರಣ; ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿದ್ದನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡ 55 ವರ್ಷದ ವ್ಯಕ್ತಿ

Photo Credit| Express
ಕೋಝಿಕ್ಕೋಡ್: ಸುಮಾರು 40 ವರ್ಷಗಳ ಹಿಂದೆ ಕೋಝಿಕ್ಕೋಡ್ ಜಿಲ್ಲೆಯ ಕೂಡರಂಜಿಯಲ್ಲಿ ಮುಳುಗಿ ಸಾವನ್ನಪ್ಪಿದ ಗುರುತಿಸಲಾಗದ ವ್ಯಕ್ತಿಯ ಪ್ರಕರಣವೊಂದು ಈಗ ಕೊಲೆ ಪ್ರಕರಣವಾಗಿ ಬೆಳಕಿಗೆ ಬಂದಿದೆ. 55 ವರ್ಷದ ವ್ಯಕ್ತಿಯೊಬ್ಬನ ಸ್ವಯಂಪ್ರೇರಿತ ತಪ್ಪೊಪ್ಪಿಗೆಯ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ನಡೆಸಿದ 11 ತಿಂಗಳ ತನಿಖೆಯಲ್ಲಿ, ಮೃತ ವ್ಯಕ್ತಿ ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ ಮೋಹನನ್ ಎಂಬುದು ದೃಢಪಟ್ಟಿದೆ.
1986ರ ಅಂತ್ಯದ ವೇಳೆಗೆ ಉದ್ಯೋಗದ ನಿಮಿತ್ತ ಕೋಝಿಕ್ಕೋಡ್ ಗೆ ಬಂದಿದ್ದ ಮೋಹನನ್ ನಾಪತ್ತೆಯಾಗಿದ್ದರು. ಬಳಿಕ ಅವರ ಬಗ್ಗೆ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಇದೇ ಅವಧಿಯಲ್ಲಿ ಕೂಡರಂಜಿಯಲ್ಲಿ ಪತ್ತೆಯಾಗಿದ್ದ ಗುರುತಿಸಲಾಗದ ಶವವನ್ನು ಅಧಿಕಾರಿಗಳು ಮುಳುಗಿ ಸತ್ತ ಪ್ರಕರಣವೆಂದು ಪರಿಗಣಿಸಿ ಕೇಸ್ ಮುಚ್ಚಿದ್ದರು.
ಆದರೆ ಕಳೆದ ವರ್ಷ ವೆಂಗಾರ ನಿವಾಸಿ ಮುಹಮ್ಮದ್ ಅಲಿ (ಹಿಂದಿನ ಹೆಸರು ಆಂಟನಿ) ಎಂಬಾತ ಪೊಲೀಸರ ಮುಂದೆ ಹಾಜರಾಗಿ, ತಾನು 14 ವರ್ಷದವನಾಗಿದ್ದಾಗ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಹೇಳಿಕೆಯೇ ಪ್ರಕರಣದ ಮರುತನಿಖೆಗೆ ಕಾರಣವಾಯಿತು.
ಅಲಿಯ ಹೇಳಿಕೆಯ ಪ್ರಕಾರ, 1986ರ ಕೊನೆಯಲ್ಲಿ ಕೂಡರಂಜಿಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಪ್ರತಿರೋಧಿಸುವ ವೇಳೆ ನದಿಗೆ ತಳ್ಳಿದ್ದ. ಬಳಿಕ ಆತ ನೀರಿನಲ್ಲಿ ಮುಳುಗುವವರೆಗೆ ಹಿಡಿದುಕೊಂಡಿದ್ದರಿಂದ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾನೆ.
‘ಆ ಸಂದರ್ಭದಲ್ಲಿ ಪತ್ತೆಯಾಗಿದ್ದ ಶವವನ್ನು ಅಪರಿಚಿತ ವ್ಯಕ್ತಿ ಮುಳುಗಿ ಸಾವು ಎಂದು ದಾಖಲಿಸಿ ಪ್ರಕರಣ ಮುಚ್ಚಲಾಗಿತ್ತು. ಅಪರಾಧವು ಸಂಪೂರ್ಣವಾಗಿ ಮರೆಮಾಚಲ್ಪಟ್ಟಿತ್ತು’ ಎಂದು ತಿರುವಾಂಬಾಡಿ ಪೊಲೀಸ್ ಠಾಣೆಯ ಎಸ್ಎಚ್ಒ ಪ್ರಶಾಂತ್ ಕೆ. ತಿಳಿಸಿದ್ದಾರೆ.
ತಪ್ಪೊಪ್ಪಿಗೆಯ ಬಳಿಕ ತನಿಖಾಧಿಕಾರಿಗಳು ಹಳೆಯ ದಾಖಲೆಗಳು, ಕಾಣೆಯಾದ ವ್ಯಕ್ತಿಗಳ ವರದಿಗಳು ಹಾಗೂ 1986ರ ಡಿಸೆಂಬರ್ 5ರಂದು ಪ್ರಕಟವಾಗಿದ್ದ ಪತ್ರಿಕಾ ವರದಿಗಳನ್ನು ಪರಿಶೀಲಿಸಿದರು. ಈ ದಾಖಲೆಗಳ ಆಧಾರದಲ್ಲಿ ಘಟನೆ ನಡೆದ ಸಮಯ ಮತ್ತು ಸ್ಥಳವನ್ನು ದೃಢಪಡಿಸಿ, ಮೃತ ವ್ಯಕ್ತಿಯ ಗುರುತನ್ನು ಮೋಹನನ್ ಎಂದು ಖಚಿತಪಡಿಸಿದರು.
ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಅಲಿ, ‘ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರುವುದು ಸಮಾಧಾನ ತಂದಿದೆ. ನ್ಯಾಯಾಲಯ ವಿಧಿಸುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.
ಮಂಜೇರಿ ಉಪ ಕಾರಾಗೃಹದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು, ತಮ್ಮ ಪರವಾಗಿ ವಕೀಲರ ಸೇವೆ ಪಡೆಯುವುದಿಲ್ಲ ಎಂದೂ ತಿಳಿಸಿದ್ದಾರೆ.
‘ನನಗೆ ವಕೀಲರ ಅಗತ್ಯವಿಲ್ಲ. ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಹೇಗಿರುತ್ತದೆ ಎಂಬುದು ತಿಳಿದಿಲ್ಲ. ಆದರೆ ಶಿಕ್ಷೆ ಎದುರಿಸಲು ಸಿದ್ಧನಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಪ್ರಕರಣವು ಈಗ ಕಾನೂನು ಮತ್ತು ಕಾರ್ಯವಿಧಾನದ ಹಲವು ಪ್ರಶ್ನೆಗಳನ್ನು ಎದುರಿಸುತ್ತಿದೆ. ಅಪರಾಧ ನಡೆದಾಗ ಆರೋಪಿಗೆ ಕೇವಲ 14 ವರ್ಷ ವಯಸ್ಸಾಗಿದ್ದ ಕಾರಣ, ಪ್ರಕರಣವನ್ನು ಬಾಲನ್ಯಾಯ ಮಂಡಳಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ತಮರಸ್ಸೇರಿ ಡಿವೈಎಸ್ಪಿ ವಿನೋದ್ ಕುಮಾರ್ ಕೆ. ತಿಳಿಸಿದ್ದಾರೆ. ಆದರೆ ನಾಲ್ಕು ದಶಕಗಳ ಹಿಂದಿನ ಘಟನೆಯಾಗಿರುವುದರಿಂದ ವಿಚಾರಣೆಯ ಮುಂದಿನ ಹಾದಿ ಸ್ಪಷ್ಟವಾಗಿಲ್ಲ.
ಕಾನೂನು ತಜ್ಞರ ಪ್ರಕಾರ, ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಏಕೆಂದರೆ ಅಪರಾಧ ನಡೆದಿರುವುದನ್ನು ಸಾಬೀತುಪಡಿಸಲು ಅಗತ್ಯವಾದ ಭೌತಿಕ ಸಾಕ್ಷ್ಯಗಳು ಈಗ ಲಭ್ಯವಿಲ್ಲ. ಸುಮಾರು 40 ವರ್ಷಗಳ ಅವಧಿಯಲ್ಲಿ ಯಾವುದೇ ಅವಶೇಷಗಳು, ಆಯುಧಗಳು ಅಥವಾ ವಿಧಿವಿಜ್ಞಾನ ಸಾಕ್ಷ್ಯಗಳು ಉಳಿದಿಲ್ಲ.
ಇದಲ್ಲದೆ, ಪೊಲೀಸ್ ಅಧಿಕಾರಿಗಳ ಮುಂದೆ ನೀಡಲಾದ ತಪ್ಪೊಪ್ಪಿಗೆಯನ್ನು ಮಾತ್ರ ಆಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ‘ಆರೋಪಿ ಕಾನೂನು ಸಲಹೆ ಪಡೆಯದಿದ್ದರೂ ನ್ಯಾಯಾಲಯವು ನ್ಯಾಯಸಮ್ಮತ ವಿಚಾರಣೆಯನ್ನು ಖಚಿತಪಡಿಸಬೇಕು. ಕೊಲೆ ಪ್ರಕರಣದಂತಹ ಗಂಭೀರ ಅಪರಾಧಗಳಲ್ಲಿ ಪೊಲೀಸ್ ಮುಂದೆ ನೀಡಲಾದ ತಪ್ಪೊಪ್ಪಿಗೆಯೊಂದನ್ನೇ ಆಧಾರವಾಗಿ ತೆಗೆದುಕೊಂಡು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ’ ಎಂದು ಸುಲ್ತಾನ್ ಬಥೇರಿಯ ವಕೀಲ ಸಾಜಿ ವರ್ಗೀಸ್ ಹೇಳಿದ್ದಾರೆ.
ತಪ್ಪೊಪ್ಪಿಗೆಯನ್ನು ಬೆಂಬಲಿಸುವ ಸ್ವತಂತ್ರ ಸಾಕ್ಷ್ಯಗಳು ಅಥವಾ ವಸ್ತುಗಳ ವಶಪಡಿಸಿಕೊಳ್ಳುವಿಕೆ ಇಲ್ಲದಿರುವುದರಿಂದ ಪ್ರಕರಣದ ನ್ಯಾಯಾಂಗ ಪ್ರಗತಿ ಸಂಕೀರ್ಣವಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, 1989ರಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದ ಬಗ್ಗೆಯೂ ಅಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ತನ್ನಿಂದ ಹಣ ಕಸಿದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ತಾನು ಮತ್ತು ‘ಗಾಂಜಾ ಬಾಬು’ ಎಂದು ಕರೆಯಲ್ಪಡುವ ಸಹಚರ ಸೇರಿ ವೆಳ್ಳಾಯಿಲ್ ಕಡಲತೀರದಲ್ಲಿ ಕೊಲೆ ಮಾಡಿದ್ದಾಗಿ ಆತ ಹೇಳಿದ್ದಾನೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು 1989ರ ಸೆಪ್ಟೆಂಬರ್ 24ರಂದು ಪ್ರಕಟವಾಗಿದ್ದ ಪತ್ರಿಕಾ ವರದಿಯೊಂದನ್ನು ಪತ್ತೆಹಚ್ಚಿದ್ದು, ಅದರಲ್ಲಿ ವೆಳ್ಳಾಯಿಲ್ ಕಡಲತೀರದಲ್ಲಿ ಗುರುತಿಸಲಾಗದ ಶವ ಪತ್ತೆಯಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಆದರೆ ಈ ಎರಡನೇ ಪ್ರಕರಣದ ಅಧಿಕೃತ ದೃಢೀಕರಣ ಇನ್ನೂ ಆಗಿಲ್ಲ. ಗಾಂಜಾ ಬಾಬುವಿನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಅಪರಾಧದ ಬಳಿಕ ಅಲಿ ಆತನೊಂದಿಗೆ ಸಂಪರ್ಕ ಕಳೆದುಕೊಂಡಿರುವುದರಿಂದ ತನಿಖೆಗೆ ಇದು ಸವಾಲಾಗಿ ಪರಿಣಮಿಸಿದೆ.






