"ಮ್ಯಾಜಿಸ್ಟ್ರೇಟ್ಗೆ ಧೈರ್ಯ ಹೇಗೆ ಬಂತು?"; CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ ನೋಟಿಸ್ ನೀಡಿದ್ದಕ್ಕೆ ಸುಪ್ರೀಂ ಕೋರ್ಟ್ ಆಕ್ರೋಶ

ಸುಪ್ರೀಂ ಕೋರ್ಟ್ (Photo: PTI)
ಹೊಸದಿಲ್ಲಿ: ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಎಫ್ಐಆರ್ಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಈ ಹಿಂದೆ ಆದೇಶ ನೀಡಿದ್ದರೂ, ಗ್ರೇಟರ್ ನೋಯ್ಡಾದ ಮ್ಯಾಜಿಸ್ಟ್ರೇಟ್ ವಿದ್ಯಾರ್ಥಿಯೊಬ್ಬರಿಗೆ ನೋಟಿಸ್ ಹೇಗೆ ನೀಡಿದರು ಎಂದು ಬುಧವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಈ ವಿಷಯವನ್ನು ಹಿರಿಯ ವಕೀಲ ಬಿಶ್ವಜಿತ್ ಭಟ್ಟಾಚಾರ್ಯ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠದ ಮುಂದೆ ಮೌಖಿಕವಾಗಿ ಪ್ರಸ್ತಾಪಿಸಿದ್ದಾರೆ.
ವರದಿ ಪ್ರಕಾರ, ಗೌತಮ ಬುದ್ಧ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿಗೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನೋಟಿಸ್ ಜಾರಿ ಮಾಡಿದ್ದರು. ಶಾಂತಿ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು 5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಏಕೆ ಆದೇಶಿಸಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ನೋಟಿಸ್ನಲ್ಲಿ ತಿಳಿಸಲಾಗಿತ್ತು. ನಂತರ ಈ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ವಕೀಲ ಬಿಶ್ವಜಿತ್ ಭಟ್ಟಾಚಾರ್ಯ ಅವರು ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದಾರೆ.
ಈ ಕ್ರಮವನ್ನು ಪ್ರಶ್ನಿಸಿದ ಸಿಜೆಐ, ನೋಟಿಸ್ ಜಾರಿ ಮಾಡಲು ಮ್ಯಾಜಿಸ್ಟ್ರೇಟ್ ಹೇಗೆ ಧೈರ್ಯ ತೋರಿದರು? ಎಂದು ಪ್ರಶ್ನಿಸಿದರು. CJP ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂಬುದನ್ನೂ ಅವರು ಗಮನಿಸಿದರು.
ನೋಯ್ಡಾ ಪೊಲೀಸರ ವರದಿಯ ಆಧಾರದ ಮೇಲೆ ಈ ನೋಟಿಸ್ ಜಾರಿ ಮಾಡಲಾಗಿದೆ. ಇಂತಹ ಕ್ರಮವು ವಿದ್ಯಾರ್ಥಿಗಳಲ್ಲಿ “ಭಯದ ಮನೋಭಾವ”ವನ್ನು ಸೃಷ್ಟಿಸಬಹುದು. ಈ ಕ್ರಮವು ನ್ಯಾಯಾಂಗ ನಿಂದನೆಗೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಭಟ್ಟಾಚಾರ್ಯ ಅವರು ತಿಳಿಸಿದರು.
ಈ ವೇಳೆ ಈ ಕುರಿತು ಸಂಬಂಧಪಟ್ಟ ಪ್ರಾಧಿಕಾರದಿಂದ ವಿವರಣೆಯನ್ನು ಪಡೆಯುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.






