ಮುಸ್ಲಿಮರ ಮೇಲಿನ ದಾಳಿ, ಗುಂಪು ಹತ್ಯೆ ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಆಯೋಗಗಳ ನಿರ್ಲಕ್ಷ್ಯ: ಅಲಹಾಬಾದ್ ಹೈಕೋರ್ಟ್ ನಲ್ಲಿ ಭಿನ್ನಾಭಿಪ್ರಾಯ; ಪ್ರತ್ಯೇಕ ಮಧ್ಯಂತರ ಆದೇಶ

ಅಲಹಾಬಾದ್ ಹೈಕೋರ್ಟ್ | Photo Credit : PTI
►"ದೇಶದಾದ್ಯಂತ ಮುಸ್ಲಿಮರ ಮೇಲೆ ನಡೆಯುವ ದಾಳಿ, ಗುಂಪು ಹತ್ಯೆ ಪ್ರಕರಣಗಳಲ್ಲಿ NHRC ಸ್ವಯಂಪ್ರೇರಿತ ಕ್ರಮ ಕೈಗೊಳ್ಳುತ್ತಿಲ್ಲ"
►"ಹೈಕೋರ್ಟ್ ಪರಿಹರಿಸಬಹುದಾದ ಪ್ರಕರಣಗಳಲ್ಲಿ ಗಮನ ಹರಿಸಲು ಆಯೋಗಕ್ಕೆ ಸಮಯವಿದೆ"
ಪ್ರಯಾಗರಾಜ್, ಎ.30: ದೇಶದಲ್ಲಿನ ಮಾನವ ಹಕ್ಕುಗಳ ಆಯೋಗಗಳು ಮುಸ್ಲಿಮರ ಮೇಲೆ ನಡೆಯುವ ಹಲ್ಲೆಗಳು ಹಾಗೂ ಗುಂಪು ಹತ್ಯೆಗಳಂತಹ ಗಂಭೀರ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ತನಿಖೆ ಕೈಗೊಳ್ಳಲು ವಿಫಲವಾಗಿವೆ ಎಂಬ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರ ಅಭಿಪ್ರಾಯದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅಪರೂಪದ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ಇಬ್ಬರು ನ್ಯಾಯಮೂರ್ತಿಗಳು ಪ್ರತ್ಯೇಕ ಮಧ್ಯಂತರ ಆದೇಶಗಳನ್ನು ಹೊರಡಿಸಿದ್ದಾರೆ ಎಂದು barandbench.com ವರದಿ ಮಾಡಿದೆ.
ಮದರಸಾಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೊರಡಿಸಿದ್ದ ಕೆಲವು ಆದೇಶಗಳನ್ನು ಪ್ರಶ್ನಿಸಿ ಶಿಕ್ಷಕರ ಸಂಘ ‘ಮದರಿಸ್ ಅರೇಬಿಯಾ’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು, ದೇಶಾದ್ಯಂತ ಮಾನವ ಹಕ್ಕುಗಳ ಆಯೋಗಗಳು ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ನಡೆಯುವ ದಾಳಿಗಳು, ಕೆಲವೊಮ್ಮೆ ಸಂಭವಿಸುವ ಗುಂಪು ಹತ್ಯೆಗಳಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀಕ್ಷ್ಣವಾಗಿ ಅಭಿಪ್ರಾಯಪಟ್ಟರು. ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸದಿರುವುದು ಅಥವಾ ಸಮರ್ಪಕ ತನಿಖೆ ನಡೆಯದಿರುವಂತಹ ಸಂದರ್ಭಗಳಲ್ಲಿಯೂ ಆಯೋಗಗಳ ಚುರುಕಿನ ಕೊರತೆ ಕಂಡುಬರುತ್ತಿದೆ ಎಂದು ಅವರು ಉಲ್ಲೇಖಿಸಿದರು.
ಇದೇ ವೇಳೆ, ನ್ಯಾಯಮೂರ್ತಿ ವಿವೇಕ್ ಸರನ್ ಅವರು ಇಂತಹ ವ್ಯಾಪಕ ಸಾಮಾನ್ಯೀಕರಣವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯದಲ್ಲಿ ಸ್ಪಷ್ಟಪಡಿಸಿದರು.
ಮದರಸಾಗಳ ವಿರುದ್ಧ ತನಿಖೆಗೆ ನಿರ್ದೇಶನ ನೀಡುವ NHRC ಅಧಿಕಾರವನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಶ್ರೀಧರನ್, ಮಾನವ ಹಕ್ಕುಗಳ ಆಯೋಗಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ ವಿಷಯಗಳಲ್ಲಿ ತಲೆಹಾಕುತ್ತಿವೆ ಎಂದು ಹೇಳಿದರು. ಸಂವಿಧಾನದ ವಿಧಿ 226ರ ಅಡಿಯಲ್ಲಿ ಹೈಕೋರ್ಟ್ ವ್ಯಾಪ್ತಿಗೆ ಒಳಪಡುವ ವಿಷಯಗಳತ್ತವೇ ಆಯೋಗಗಳು ಹೆಚ್ಚು ಗಮನ ಹರಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
“ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ದಾಳಿ ನಡೆದಾಗ, ಕೆಲವೊಮ್ಮೆ ಗುಂಪು ಹತ್ಯೆಗಳು ಸಂಭವಿಸಿದಾಗ, ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಅಥವಾ ಸರಿಯಾದ ತನಿಖೆ ನಡೆಯದಿದ್ದರೆ, ಮಾನವ ಹಕ್ಕುಗಳ ಆಯೋಗಗಳು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಅವು ಸಂಬಂಧಿಸದ ವಿಷಯಗಳತ್ತ ಹೆಚ್ಚು ಗಮನ ಹರಿಸುತ್ತಿವೆ,” ಎಂದು ನ್ಯಾಯಮೂರ್ತಿ ಶ್ರೀಧರನ್ ಹೇಳಿದರು.
ಸಾಮಾನ್ಯ ನಾಗರಿಕರು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಕಿರುಕುಳ ನೀಡುವ ಪ್ರಕರಣಗಳಲ್ಲಿಯೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಗಮನ ಹರಿಸಿರುವ ಉದಾಹರಣೆಗಳು ನ್ಯಾಯಾಲಯದ ಗಮನಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಭಿನ್ನ ಧರ್ಮಗಳ ವ್ಯಕ್ತಿಗಳ ನಡುವಿನ ಸಂಬಂಧಗಳ ಹಿನ್ನೆಲೆಯಲ್ಲಿ ನಡೆಯುವ ಕಿರುಕುಳದ ಪ್ರಕರಣಗಳನ್ನೂ ಅವರು ಉಲ್ಲೇಖಿಸಿದರು. ಸಾರ್ವಜನಿಕ ಸ್ಥಳದಲ್ಲಿ ವಿಭಿನ್ನ ಧರ್ಮದ ವ್ಯಕ್ತಿಯೊಂದಿಗೆ ಕಾಫಿ ಕುಡಿಯುವುದೇ ಕೆಲವೊಮ್ಮೆ ಭಯ ಹುಟ್ಟಿಸುವ ಘಟನೆ ಆಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಇಂತಹ ಪ್ರಕರಣಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವಾಗಲಿ ಅಥವಾ ರಾಷ್ಟ್ರೀಯ ಆಯೋಗವಾಗಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಯಾವುದೇ ನಿದರ್ಶನವನ್ನು ಈ ನ್ಯಾಯಾಲಯದ ಮುಂದೆ ಮಂಡಿಸಲಾಗಿಲ್ಲ. ಬದಲಿಗೆ, ಹೈಕೋರ್ಟ್ ವ್ಯಾಪ್ತಿಗೆ ಒಳಪಡುವ ಮತ್ತು ಪರಿಣಾಮಕಾರಿಯಾಗಿ ಪರಿಹರಿಸಬಹುದಾದ ವಿಷಯಗಳತ್ತ ಗಮನ ಹರಿಸಲು ಅವುಗಳಿಗೆ ಸಮಯವಿದೆ,” ಎಂದು ನ್ಯಾಯಮೂರ್ತಿ ಶ್ರೀಧರನ್ ಹೇಳಿದರು.
ಇದಕ್ಕೆ ವಿರುದ್ಧವಾಗಿ, ನ್ಯಾಯಮೂರ್ತಿ ವಿವೇಕ್ ಸರನ್ ಅವರು ಮಾನವ ಹಕ್ಕುಗಳ ಆಯೋಗಗಳ ಕಾರ್ಯವೈಖರಿಯ ಬಗ್ಗೆ ಇಂತಹ ಅಭಿಪ್ರಾಯವನ್ನು ಒಪ್ಪಲಿಲ್ಲ ಎಂದು ತಮ್ಮ ಪ್ರತ್ಯೇಕ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.






