ಮಹಿಳೆಯರ ಬೆತ್ತಲೆ ಮೆರವಣಿಗೆ: 'ಇಂತಹ ನೂರಾರು ಘಟನೆ ನಡೆದಿದೆ' ಎಂದ ಮಣಿಪುರ ಸಿಎಂ ವಿರುದ್ಧ ವ್ಯಾಪಕ ಆಕ್ರೋಶ

ಇಂಫಾಲ: ಕುಕಿ ಸಮುದಾಯದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯ ವೀಡಿಯೊ ಕುರಿತು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ‘‘ರಾಜ್ಯದಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿವೆೆ’’ ಎಂದು ಗುರುವಾರ ಹೇಳಿದ್ದಾರೆ. ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
‘ಇಂಡಿಯಾ ಟುಡೆ’ಯ ವಿಶೇಷ ಟೆಲಿಫೋನ್ ಸಂದರ್ಶನದಲ್ಲಿ ನಿರೂಪಕಿ, ‘‘ನಿಮ್ಮ ರಾಜ್ಯದಲ್ಲಿ ದುಷ್ಕರ್ಮಿಗಳ ಗುಂಪು ಮಹಿಳೆಯರನ್ನು ಅಮಾನವೀಯವಾಗಿ ಬೆತ್ತಲೆ ಮೆರವಣಿಗೆ ಮಾಡಿದ ಹಾಗೂ ಅತ್ಯಾಚಾರಗೈದ ಘಟನೆ ಸರಕಾರದ ಗಮಕ್ಕೆ ಯಾಕೆ ಬಂದಿಲ್ಲ’’ ಎಂದು ಬಿರೇನ್ ಸಿಂಗ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್, ‘‘ರಾಜ್ಯದಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿವೆ. ಆದುದರಿಂದ ನಮ್ಮ ರಾಜ್ಯದಲ್ಲಿ ಇಂಟರ್ನೆಟ್ ಗೆ ನಿಷೇಧ ಹೇರಿದ್ದೇವೆೆ’’ ಎಂದರು. ತನ್ನ ಪ್ರತಿಕ್ರಿಯೆಯನ್ನು ಮುಂದುವರಿಸಿದ ಸಿಂಗ್, ‘‘ಈ ಒಂದು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ.
ಆದರೂ ನಾನು ಇದನ್ನು ಖಂಡಿಸುತ್ತೇನೆ. ಇದು ಮಾನವತೆಯ ವಿರುದ್ಧದ ಅಪರಾಧ. ಎಲ್ಲಾ ಆರೋಪಿಗಳನ್ನು ನ್ಯಾಯದ ಮುಂದೆ ತರಲು ಪ್ರಯತ್ನಿಸುತ್ತಿದ್ದೇವೆ’’ ಎಂದರು.





