Hurun India Rich List | ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.1 ಆದ ಗೌತಮ್ ಅದಾನಿ

ಗೌತಮ್ ಅದಾನಿ | Photo Credit : X
ಹೊಸದಿಲ್ಲಿ: ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2026ರ ಪ್ರಕಾರ, ಗೌತಮ್ ಅದಾನಿ ಮತ್ತು ಕುಟುಂಬವು 9.22 ಲಕ್ಷ ಕೋಟಿ ರೂ.ಗೂ ಅಧಿಕ ನಿವ್ವಳ ಮೌಲ್ಯದೊಂದಿಗೆ ಭಾರತದ ಕುಬೇರರಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಕುಟುಂಬವು 8.63 ಲಕ್ಷ ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನಕ್ಕಿಳಿದಿದೆ. ಲಂಡನ್ ಮೂಲದ ಆರ್ಸೆಲರ್ ಮಿತ್ತಲ್ನ ಲಕ್ಷ್ಮಿ ನಿವಾಸ್ ಮಿತ್ತಲ್ ಕುಟುಂಬವು 3.39 ಲಕ್ಷ ಕೋಟಿ ರೂ.ನಿವ್ವಳ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ.
ನಾಲ್ಕನೇ ಸ್ಥಾನದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ನ ಸೈರಸ್ ಎಸ್. ಪೂನಾವಾಲಾ (3.03 ಲ.ಕೋ.ರೂ.), ಐದನೇ ಸ್ಥಾನದಲ್ಲಿ ಎಚ್ಸಿಎಲ್ನ ರೋಷ್ನಿ ನಾಡರ್ ಮಲ್ಹೋತ್ರಾ ಕುಟುಂಬ (2.78 ಲ.ಕೋ. ರೂ.),ಆರನೇ ಸ್ಥಾನದಲ್ಲಿ ಆದಿತ್ಯ ಬಿರ್ಲಾ ಗುಂಪಿನ ಕುಮಾರ ಮಂಗಲಂ ಬಿರ್ಲಾ (2.69 ಲ.ಕೋ.ರೂ.),ಏಳನೇ ಸ್ಥಾನದಲ್ಲಿ ಸನ್ ಫಾರ್ಮಾಸ್ಯುಟಿಕಲ್ಸ್ನ ದಿಲೀಪ್ ಸಾಂಘ್ವಿ (2.65 .ಲ.ಕೋ.ರೂ.) ಇದ್ದಾರೆ.
ವಿಪ್ರೋದ ಅಜೀಂ ಪ್ರೇಮ್ಜಿ ಮತ್ತು ಕುಟುಂಬ (2.63 ಲ.ಕೋ.ರೂ.) ಎಂಟನೇ, ವೇದಾಂತ ರಿಸೋರ್ಸಸ್ನ ಅನಿಲ್ ಅಗರ್ವಾಲ್ ಮತ್ತು ಕುಟುಂಬ (2.08 ಲ.ಕೋ.ರೂ) ಒಂಬತ್ತನೇ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ನ ಸಮೀರ್ ಮೆಹ್ತಾ ಮತ್ತು ಕುಟುಂಬ(1.89 ಲ.ಕೋ.ರೂ.) ಹತ್ತನೇ ಸ್ಥಾನಗಳಲ್ಲಿದ್ದಾರೆ.
2026ರ ಹುರೂನ್ ಪಟ್ಟಿಯಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೋಟಕ್, ಡಿಎಲ್ಎಫ್ನ ರಾಜೀವ್ ಸಿಂಗ್ ಮತ್ತು ಕುಟುಂಬ, ಭಾರ್ತಿ ಏರ್ಟೆಲ್ನ ಸುನಿಲ್ ಮಿತ್ತಲ್, ಜೊಹೋದ ರಾಧಾ ವೆಂಬು, ಟಿವಿಎಸ್ ಮೋಟರ್ನ ವೇಣು ಶ್ರೀನಿವಾಸನ್, ಏಶ್ಯನ್ ಪೇಂಟ್ಸ್ನ ಇನಾ ಅಶ್ವಿನ್ ದಾನಿ ಮತ್ತು ಕುಟುಂಬ, ಜೆರೋಧಾದ ನಿಖಿಲ್ ಕಾಮತ್ ಮುಂತಾದವರೂ ಸ್ಥಾನ ಪಡೆದಿದ್ದಾರೆ.






