ವಿಚ್ಛೇದನ ಪ್ರಕರಣದಲ್ಲಿ ವಕಾಲತ್ತಿನ ವೇಳೆ ವಕೀಲೆಯೊಂದಿಗೇ ʼಸಂಬಂಧʼ!

Photo: PTI
ಹೊಸದಿಲ್ಲಿ: ತನ್ನ ವಿಚ್ಛೇದನ ಪ್ರಕರಣದಲ್ಲಿ ತನ್ನ ಪರ ವಕಾಲತ್ತು ವಹಿಸಿದ್ದ ವಿಚ್ಛೇದಿತ ಮಹಿಳಾ ವಕೀಲೆಯೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದುದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸಂಬಂಧ ಮುರಿದುಬಿದ್ದ ಹಿನ್ನೆಲೆಯಲ್ಲಿ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಐಟಿ ವೃತ್ತಿಪರಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿ, ಆರೋಪಿತನ ವಿರುದ್ಧ ಬಂಧನದಂತಹ ಕಠಿಣ ಕ್ರಮಗಳಿಗೆ ಯಾವುದೇ ಸಮರ್ಥನೆ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಇಬ್ಬರ ನಡುವಿನ ಸಂಬಂಧ ಪರಸ್ಪರ ಒಪ್ಪಿಗೆಯ ಮೇರೆಗೆ ನಡೆದಿದ್ದು, ಅದು ನಂತರ ಮುರಿದುಬಿದ್ದಿದೆ ಎಂಬುದನ್ನು ಪೀಠ ಗಮನಿಸಿತು.
ವಿಚಾರಣೆಯ ವೇಳೆ, ವೃತ್ತಿಪರ ಗಡಿಗಳನ್ನು ಮೀರಿ ಕಕ್ಷಿದಾರರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದ ವಕೀಲೆಯ ನಡವಳಿಕೆ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ ಇಂತಹ ಸಂಬಂಧವು ವೃತ್ತಿಪರ ನೀತಿಶಾಸ್ತ್ರದ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಈ ಹಿಂದಿನ ವಿಚಾರಣೆಯ ವೇಳೆ, “ನೀವು ಈ ಗೊಂದಲದಲ್ಲಿ ಏಕೆ ಸಿಲುಕಿಕೊಂಡಿರಿ?” ಎಂದು ನ್ಯಾಯಾಲಯ ವಕೀಲೆಯನ್ನು ಪ್ರಶ್ನಿಸಿತ್ತು.
ಸಂಬಂಧದ ಸ್ವರೂಪವನ್ನು ವಿಶ್ಲೇಷಿಸಿದ ನ್ಯಾಯಾಲಯ, ಇಬ್ಬರೂ ಮದುವೆಯ ಉದ್ದೇಶವಿಲ್ಲದೆ ಒಪ್ಪಿಗೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬುದನ್ನು ದಾಖಲಿಸಿತು. ವೈಯಕ್ತಿಕ ಸಂಬಂಧ ವಿಫಲವಾದುದನ್ನೇ ಆಧಾರವಾಗಿ ಕ್ರಿಮಿನಲ್ ಕಾನೂನು ಪ್ರಯೋಗಿಸುವುದು ಸೂಕ್ತವಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ, ಆರೋಪಿತನ ವಿರುದ್ಧ ಜಾಮೀನು ರಹಿತ ವಾರಂಟ್, ಲುಕ್ಔಟ್ ಸುತ್ತೋಲೆ ಹಾಗೂ ಬ್ಲೂ ಕಾರ್ನರ್ ನೋಟಿಸ್ ಸೇರಿದಂತೆ ಹಲವು ಬಲವಂತದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಾದಿಸಲಾಯಿತು. ಆದರೆ ಪ್ರಕರಣದ ಸ್ವಭಾವಕ್ಕೆ ಇಂತಹ ಕ್ರಮಗಳು ಅನಗತ್ಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಜನವರಿ 7ರಂದು ಹೊರಡಿಸಿದ ಅಂತಿಮ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಈಗಾಗಲೇ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ದೃಢಪಡಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಆರೋಪಿಯ ವಿರುದ್ಧ ಜಾರಿಯಲ್ಲಿದ್ದ ಲುಕ್ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಹಾಗೂ ಘೋಷಿತ ಅಪರಾಧಿ ಸಂಬಂಧಿತ ಕ್ರಮಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ.
ಪ್ರಸ್ತುತ ಲಂಡನ್ ನಲ್ಲಿ ವಾಸಿಸುತ್ತಿರುವ ಆರೋಪಿಯು ತನಿಖೆಗೆ ಸಂಬಂಧಿಸಿದಂತೆ ಭಾರತಕ್ಕೆ ಬಂದಲ್ಲಿ ಈ ಆದೇಶವು ಆತನನ್ನು ರಕ್ಷಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತನಿಖಾ ದಿನಾಂಕಗಳನ್ನು ಮುಂಚಿತವಾಗಿ ತಿಳಿಸಬೇಕೆಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ವೈಯಕ್ತಿಕ ಘರ್ಷಣೆಗಳ ಹಿನ್ನೆಲೆಯಲ್ಲಿ ಕ್ರಿಮಿನಲ್ ಕಾನೂನನ್ನು ಒತ್ತಡ ಅಥವಾ ಸೇಡಿನ ಸಾಧನವಾಗಿ ಬಳಸಬಾರದು ಎಂಬ ಸ್ಪಷ್ಟ ಸಂದೇಶವನ್ನು ಈ ತೀರ್ಪು ನೀಡುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.







