Hyderabad | ಡೆತ್ ನೋಟ್ ಬರೆದಿಟ್ಟು NEET ಆಕಾಂಕ್ಷಿ ಆತ್ಮಹತ್ಯೆ

Photo | ITG/ indiatoday
ಹೈದರಾಬಾದ್: ರವಿವಾರ ನಿಗದಿಯಾಗಿದ್ದ ನೀಟ್ ಮರು ಪರೀಕ್ಷೆಗೂ ಒಂದು ದಿನ ಮುನ್ನ, “ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ” ಎಂದು ಪತ್ರ ಬರೆದಿಟ್ಟು 19 ವರ್ಷದ ನೀಟ್ ಪರೀಕ್ಷಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಮಿಯಾಪುರ್ ನಲ್ಲಿ ನಡೆದಿದೆ ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಶೇಖ್ ಸನಾ ಎಂದು ಗುರುತಿಸಲಾಗಿದ್ದು, ತನ್ನ ಸಹೋದರಿಯರೊಂದಿಗೆ ವ್ಯಾಸಂಗ ಮುಂದುವರಿಸುತ್ತಿದ್ದ ಆಕೆ, ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಎಂದು ಹೇಳಲಾಗಿದೆ. ಆಕೆಯ ತಂದೆ ಶೇಖ್ ಜಫರ್ ಹುಸೈನ್ ಕುವೈತ್ ನಲ್ಲಿ ಉದ್ಯೋಗಿಯಾಗಿದ್ದಾರೆ.
ಶೈಕ್ಷಣಿಕ ಒತ್ತಡ, ಕುಟುಂಬದ ನಿರೀಕ್ಷೆ ಹಾಗೂ ಹಿಂದಿನ ವೈಫಲ್ಯಗಳಿಂದ ಸೃಷ್ಟಿಯಾಗಿದ್ದ ಆತಂಕದಿಂದ ಆಕೆ ಖಿನ್ನತೆಗೊಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಆಕೆ, “ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ” ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಆಕೆಯ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






