Maharashtra | ಯುವತಿಯ ಅತ್ಯಾಚಾರ ಆರೋಪ: ಸ್ವಘೋಷಿತ ದೇವಮಾನವನ ಬಂಧನ

Photo Credit : indiatoday.in
ನಾಸಿಕ್: 28 ವರ್ಷ ವಯಸ್ಸಿನ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮಹಾರಾಷ್ಟ್ರದ ನಾಸಿಕ್ನ ಸ್ವಘೋಷಿತ ದೇವಮಾನವನೊಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಾನಸಿಕ ಖಿನ್ನತೆಯಿಂದ ಮುಕ್ತಿ ಪಡೆಯಲು ಈ ಯುವತಿ ಸ್ವಯಂಘೋಷಿತ ದೇವಮಾನವನನ್ನು ಸಂಪರ್ಕಿಸಿದ್ದಳೆನ್ನಲಾಗಿದೆ.
ಬಂಧಿತ ಆರೋಪಿಯನ್ನು ಮಹೇಶ್ ಗಿರಿ ಬಾಬಾ ಯಾನೆ ಮಹೇಶ್ ದಿಲೀಪ್ ಕಾಡ್ಕೆ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಯುವತಿಯು ನಾಸಿಕ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಕೌಟುಂಬಿಕ ಸಮಸ್ಯೆಹಾಗೂ ಯುವತಿಯ ಮಾನಸಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಆಕೆಯನ್ನು ಪಾಲಕರು ದೇವಮಾನವನ ಬಳಿಗೆ ಕೊಂಡೊಯ್ದಿದ್ದರು. ತಾನು ದೈವಿಕ ಶಕ್ತಿಯನ್ನು ಹೊಂದಿರುವುದಾಗಿ ಹೇಳಿಕೊಂಡ ಆತ, ಯುವತಿಗೆ ದೆವ್ವ ಹಿಡಿದಿದ್ದು, ಆಕೆಯನ್ನು ತಾನು ಗುಣಪಡಿಸುವುದಾಗಿ ತಿಳಿಸಿದ್ದನು.
ಪ್ರತಿ ಗುರುವಾರ ಪ್ರಾರ್ಥನಾಸಭೆಗೆ ಹಾಜರಾಗುವಂತೆ ಯುವತಿಗೆ ತಿಳಿಸಿದ ಕಾಡ್ಕೆ ಕ್ರಮೇಣ, ಯುವತಿಯ ಮೊಬೈಲ್ ಪೋನ್ಗೆ ಖಾಸಗಿ ವಿಷಯಗಳನ್ನು ಹಾಗೂ ಅಶ್ಲೀಲ ಸಂದೇಶಗಳನ್ನು ರವಾನಿಸತೊಡಗಿದ. 2024ರಲ್ಲಿ ಆಕೆಯನ್ನು ಏಕಾಂತ ಸ್ಥಳವೊಂದಕ್ಕೆ ಬರುವಂತೆ ತಿಳಿಸಿದ. ಅಲ್ಲಿಂದ ಆಕೆಯನ್ನು ಲಾಡ್ಜ್ಗೆ ಕರೆದೊಯ್ದಿದ್ದನೆಂದು ಆರೋಪಿಸಲಾಗಿದೆ.
ಆಗ ಯುವತಿಯು ಪ್ರತಿರೋಧಿಸಿದಾಗ ,ಆತ ರುದ್ರಾಕ್ಷಿಯ ಮಾಲೆಯನ್ನು ತೋರಿಸಿ, ತನಗೆ ದೈವಿಕ ಶಕ್ತಿಯಿದ್ದು, ಈಗ ನಿನಗೆ ಯಾವುದನ್ನೂ ವಿರೋಧಿಸಲು ಸಾಧ್ಯವಾಗದೆಂದು ಹೇಳಿದ್ದ ಮತ್ತು ಆಕೆಯೊಂದಿಗೆ ಬಲವಂತವಾಗಿ ಲೈಂಗಿಕಕ್ರಿಯೆ ನಡೆಸಿದ್ದ. ಅಲ್ಲದೆ ಆಕೆಯ ನಗ್ನ ಫೋಟೋಗಳನ್ನು ಕೂಡಾ ತೆಗೆದಿದ್ದನೆನ್ನಲಾಗಿದೆ.
ನಡೆದ ಸಂಗತಿಯನ್ನು ಆಕೆ ಸಂಬಂಧಿಕರಿಗೆ ತಿಳಿಸಿದಾಗ, ಕಾಕ್ಡೆ ಆಕೆಯನ್ನು ಬೆದರಿಸಿದ್ದ. ತಾನು ಗೂಂಡಾನೂ ಹೌದೆಂದು ಹೇಳಿಕೊಂಡ ಆತ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ. ಆಕೆಯ ಮೊಬೈಲ್ ಫೋನನ್ನು ಕೂಡಾ ಕಸಿದುಕೊಂಡಿದ್ದ.ತಾನು ಕಳುಹಿಸಿದ್ದ ಸಂದೇಶಗಳನ್ನು ಮತ್ತಿತರ ಪುರಾವೆಗಳನ್ನು ಆಳಿಸಿ ಹಾಕಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಭಯದಿಂದ ಕೆಲವು ಸಮಯದವರೆಗೆ ಸುಮ್ಮನಿದ್ದ ಯುವತಿ, ಅನಂತರ ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಸಂಘಟನೆ ‘ಅಂಧಶ್ರದ್ಧೆ ನಿರ್ಮೂಲನ ಸಮಿತಿ’ಯನ್ನು ಸಂಪರ್ಕಿಸಿ ನೆರವು ಕೋರಿದ್ದಳು. ಅವರ ನೆರವಿನೊಂದಿಗೆ ಯುವತಿ ತರುವಾಯ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.






