ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಉಪವಾಸ ಅಂತ್ಯಗೊಳಿಸಲು ಬಯಸಿದ್ದೆ, ಆದರೆ ಅವರು ನಿರ್ಲಕ್ಷಿಸಿದ್ದರು: ಸೋನಮ್ ವಾಂಗ್ಚುಕ್

Photo | indiatoday
ಹೊಸದಿಲ್ಲಿ: ಜಂತರ್ ಮಂತರ್ನಲ್ಲಿ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಜ್ಯೂಸ್ ಕುಡಿಯುವ ಮೂಲಕ ಕೊನೆಗೊಳಿಸಬೇಕೆಂದು ಬಯಸಿದ್ದೆವು. ಈ ಬಗ್ಗೆ ಪತ್ನಿ ಗೀತಾಂಜಲಿ ಕೂಡ ಪ್ರಯತ್ನಿಸಿದ್ದರು. ಆದರೆ, ಅವರ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಇದು ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ಪಕ್ಷಗಳ ಬಗ್ಗೆ ನಿರಾಶೆ ಮೂಡಿಸಿದೆ ಎಂದು ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಹೇಳಿದ್ದಾರೆ.
India Today ಜೊತೆ ಸಂದರ್ಶನದಲ್ಲಿ ಮಾತನಾಡಿದ ಸೋನಂ ವಾಂಗ್ಚುಕ್, “ನಾವು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನನ್ನ ಉಪವಾಸವನ್ನು ಕೊನೆಗೊಳಿಸಬೇಕೆಂದು ಬಯಸಿದ್ದೆವು. ಇದಕ್ಕೆ ಗೀತಾಂಜಲಿ ಸಾಕಷ್ಟು ಪ್ರಯತ್ನಿಸಿದರು. ಆದರೆ, ರಾಹುಲ್ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ" ಎಂದು ಹೇಳಿದರು.
ನಾನು ವಿರೋಧ ಪಕ್ಷದ ನಾಯಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಉಪವಾಸ ಅಂತ್ಯಗೊಳಿಸುವುದಾಗಿ ಘೋಷಿಸುವವರೆಗೆ ನನಗೆ ಸೂಪ್ ನೀಡುತ್ತಿರುವ ಫೋಟೊವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಭರವಸೆ ನೀಡಿದ್ದರು. ಆದರೆ, ಅವರು ಭರವಸೆಯನ್ನು ಉಲ್ಲಂಘಿಸಿ ಫೋಟೊವನ್ನು ಬಿಡುಗಡೆ ಮಾಡಿದರು. ಹೀಗಾಗಿ ಈ ಎಲ್ಲ ನಾಯಕರ ಮೇಲಿನ ನನ್ನ ವಿಶ್ವಾಸವನ್ನು ನಾನು ಕಳೆದುಕೊಂಡಿದ್ದೇನೆ ಎಂದು ಸೋನಂ ವಾಗ್ಚುಕ್ ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ತಮ್ಮ ಪತ್ನಿ ಗೀತಾಂಜಲಿ ವ್ಯಕ್ತಪಡಿಸಿದ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಸೋನಂ ವಾಂಗ್ಚುಕ್, ಅವರು ನಿರಾಶೆಯಿಂದ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಜಂತರ್ ಮಂತರ್ ಗೆ ಪ್ರತಿಭಟನೆ ವೇಳೆ ಬಹಳ ಕಡಿಮೆ ನಾಯಕರು ಬಂದಿದ್ದರು. ಅದೂ, ತಡವಾಗಿ ಬಂದಿರುವುದು. ಇದೇ ನಿರಾಶೆಯ ಪರಿಣಾಮವಾಗಿ ನನ್ನ ಪತ್ನಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವಾಂಗ್ಚುಕ್ ಹೇಳಿದರು.
ಬಿಜೆಪಿ ವಿರುದ್ಧ ನಾಲ್ಕೈದು ಟೀಕೆಗಳನ್ನು ಮಾಡಲಾಗಿತ್ತು. ಅದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕಾಂಗ್ರೆಸ್ ಪರ ಇರುವವರು ನನ್ನ ಪತ್ನಿಯನ್ನು ಹಾಗೂ ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದರು ಎಂದು ಸೋನಂ ವಾಂಗ್ಚುಕ್ ಹೇಳಿದರು.






