'ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿರುತ್ತಿತ್ತು': ಪ್ರಧಾನಿ ಮೋದಿ ಕುರಿತು ನಟಿ ರೂಪಾಲಿ ಗಂಗುಲಿ ಹೇಳಿಕೆಗೆ ತೀವ್ರ ಟೀಕೆ

Photo credit : PTI
ಮುಂಬೈ: ಟೆಲಿವಿಷನ್ ನಟಿ ಹಾಗೂ ಬಿಜೆಪಿ ಸದಸ್ಯೆ ರೂಪಾಲಿ ಗಂಗುಲಿ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಪ್ರಾಪ್ತ ಬಾಲಕಿಯ ವೀಡಿಯೊಗೆ ಪ್ರತಿಕ್ರಿಯೆ ನೀಡಿದ ಅವರು, "ಪ್ರಧಾನಿಯನ್ನು ಈ ರೀತಿ ಅವಮಾನಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಅವರು ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಮಗುವಿನ ಪೋಷಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರೂಪಾಲಿ ಗಂಗುಲಿ, "ಪ್ರಧಾನಿಯನ್ನು ಈ ರೀತಿ ಅವಮಾನಿಸುವುದರ ಪರಿಣಾಮ ಎದುರಿಸಬೇಕಾಗುತ್ತದೆ. ಅವರು ಸರ್ವಾಧಿಕಾರಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದು ಪ್ರತಿಕ್ರಿಯೆ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ವಾಧಿಕಾರವನ್ನು ಸಮರ್ಥಿಸುವಂತಿರುವ ಈ ಹೇಳಿಕೆಯನ್ನು ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ತೀವ್ರವಾಗಿ ಟೀಕಿಸಿದ್ದು, ಅದರ ಪರಿಣಾಮಗಳನ್ನು ಗಂಗುಲಿಗೆ ನೆನಪಿಸಿದ್ದಾರೆ. ಕೆಲವರು ರಾಜಕೀಯ ಲಾಭಕ್ಕಾಗಿ ಅವರು ಇಂತಹ ಹೇಳಿಕೆ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ.
'ಸಾರಾಭಾಯಿ vs ಸಾರಾಭಾಯಿ' ಧಾರಾವಾಹಿಯಲ್ಲಿನ ಅವರ ಪಾತ್ರವನ್ನು ಉಲ್ಲೇಖಿಸಿದ ಅಭಿಮಾನಿಯೊಬ್ಬರು, "ನಾವು ಪರದೆಯ ಮೇಲೆ ಮೆಚ್ಚಿದ ಪಾತ್ರವನ್ನು ನಿರ್ವಹಿಸಿದ ನಟಿಯಿಂದ ಇಂತಹ ಧರ್ಮಾಂಧ ಹೇಳಿಕೆ ಬರುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ಮೊದಲು ಸತೀಶ್, ಈಗ ನೀವು. ಇದು ನಾಚಿಕೆಗೇಡಿನ ಸಂಗತಿ. ಇಲ್ಲಿ ದ್ವೇಷವನ್ನು ಹರಡುವ ಬದಲು ನೀವು ಈಗ ಮಾಡುತ್ತಿರುವ ಧಾರಾವಾಹಿಯತ್ತ ಗಮನಹರಿಸಿ" ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರ, "ಬೆನಿಟೊ ಮುಸೊಲಿನಿ ಯಾರು ಎಂಬುದು ನಿಮಗೆ ಗೊತ್ತೇ? ಇಟಲಿಯ ಜನರು ಅವರಿಗೆ ಕೊನೆಗೆ ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ" ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, "ಮಗುವಿನ ವಿರುದ್ಧ ಪರಿಣಾಮ ಬಯಸುತ್ತೀರಾ? ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ" ಎಂದು ಟೀಕಿಸಿದ್ದಾರೆ.
'ಸಾರಾಭಾಯಿ vs ಸಾರಾಭಾಯಿ' ಧಾರಾವಾಹಿಯಲ್ಲಿನ ಅವರ ಪಾತ್ರವನ್ನು ಉಲ್ಲೇಖಿಸಿ ಮತ್ತೊಬ್ಬ ಬಳಕೆದಾರ, "ಮೋನಿಶಾ, ಸರ್ವಾಧಿಕಾರವನ್ನು ಬಯಸುವುದು ಯಾವುದೇ ರೀತಿಯಿಂದಲೂ ಒಳ್ಳೆಯದಲ್ಲ" ಎಂದು ವ್ಯಂಗ್ಯವಾಡಿದ್ದಾರೆ. "ಪ್ರಧಾನಿಯೂ ಒಬ್ಬ ಮನುಷ್ಯ. ಅವರು ಜನರ ಹಿತಕ್ಕಾಗಿ ಕೆಲಸ ಮಾಡುತ್ತಾರೆ" ಎಂದೂ ಬರೆದಿದ್ದಾರೆ.
ಮತ್ತೊಬ್ಬರು, "ಸರ್ವಾಧಿಕಾರದಲ್ಲಿ ಆಡಳಿತಗಾರನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ. ರಾಜಕೀಯ ಅಭಿಪ್ರಾಯ ಹೊಂದುವ ಸ್ವಾತಂತ್ರ್ಯವೂ ಇರುವುದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, "ಎಲ್ಲಾ ವಿಫಲ ಮತ್ತು ಅವಕಾಶಕ್ಕಾಗಿ ಕಾಯುತ್ತಿರುವ ನಟ-ನಟಿಯರು ಯಾವುದಾದರೂ ಲಾಭದಾಯಕ ಹುದ್ದೆಯ ನಿರೀಕ್ಷೆಯಲ್ಲಿ ಬಿಜೆಪಿಗೆ ಸೇರುತ್ತಿದ್ದಾರೆ. ನಂತರ ಪಕ್ಷದ ಐಟಿ ಸೆಲ್ಗಾಗಿ ಕೆಲಸ ಮಾಡಬೇಕಾಗುತ್ತದೆ" ಎಂದು ಟೀಕಿಸಿದ್ದಾರೆ.
"ಸರ್ವಾಧಿಕಾರದಲ್ಲಿ ಮಕ್ಕಳಿಗೂ ಯಾವುದೇ ರಕ್ಷಣೆ ಇರುವುದಿಲ್ಲ. ಅವರ ಮೇಲೆ ದಮನಕಾರಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಆದ್ದರಿಂದ ಸರ್ವಾಧಿಕಾರವನ್ನು ಬಯಸುವ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಿ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, "ನೀವು ಬಿಜೆಪಿ ಟಿಕೆಟ್ ಪಡೆಯುವ ಸಾಲಿನಲ್ಲಿ ಇರುವಂತೆ ಕಾಣುತ್ತಿದೆ. ಈ ಪ್ರಕ್ರಿಯೆ ಅತಿರೇಕದ ಹೇಳಿಕೆಗಳಿಂದಲೇ ಆರಂಭವಾಗುತ್ತದೆ" ಎಂದು ಆರೋಪಿಸಿದ್ದಾರೆ.
ರೂಪಾಲಿ ಗಂಗುಲಿ ಅವರ 'ಸರ್ವಾಧಿಕಾರಿ' ಕುರಿತ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸರ್ವಾಧಿಕಾರದ ಅರ್ಥ, ಅದರ ಪರಿಣಾಮಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಂತೆ ಜನರು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ರೂಪಾಲಿ ಗಂಗುಲಿ ಪ್ರಸ್ತುತ ಸ್ಟಾರ್ ಪ್ಲಸ್ ನ ಜನಪ್ರಿಯ ಧಾರಾವಾಹಿ 'ಅನುಪಮಾ'ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.






