33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಗೊಳಗಾದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ!
ಹಲವು ಪದವಿಗಳನ್ನು ಹೊಂದಿರುವ ಹರ್ಯಾಣ ಕೇಡರ್ ಐಎಎಸ್ ಅಧಿಕಾರಿ

ಅಶೋಕ್ ಖೆಂಕಾ | PC : X
ಚಂಡೀಗಢ: ಭಾರತದಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳು ಆಳುವ ಸರಕಾರಗಳ ಕೆಂಗಣ್ಣಿಗೆ ಗುರಿಯಾಗಿ ಪದೇ ಪದೇ ವರ್ಗಾವಣೆಗೊಳ್ಳುವುದು ಸಾಮಾನ್ಯ ಸಂಗತಿ. ಅಕ್ರಮ ಕಟ್ಟಣ ನಿರ್ಮಾಣಕಾರರ ಪಾಲಿಗೆ ದುಃಸ್ವಪ್ನವಾಗಿದ್ದ ಮಹಾರಾಷ್ಟ್ರದ ಖೈರ್ನಾರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯಕ್ತರಾಗಿದ್ದ ಜೈಕರ್ ಜೆರೋಮ್ ರಂತಹ ಅಧಿಕಾರಿಗಳನ್ನು ಈ ಮಾತಿಗೆ ಉದಹರಿಸಬಹುದು. ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ತಮ್ಮ ಪ್ರಾಮಾಣಿಕತೆ ಹಾಗೂ ವೃತ್ತಿ ನಿಷ್ಠೆಯ ಕಾರಣದಿಂದಾಗಿಯೇ ತಮ್ಮ 33 ವರ್ಷದ ಸೇವಾವಧಿಯಲ್ಲಿ ಬರೋಬ್ಬರಿ 57 ಬಾರಿ ವರ್ಗಾವಣೆಗೊಂಡಿದ್ದಾರೆ!
ಇನ್ನೂ ಕೆಲವೇ ತಿಂಗಳ ಸೇವಾವಧಿ ಹೊಂದಿರುವ ಅಶೋಕ್ ಖೇಮ್ಕಾ, ಮತ್ತೊಮ್ಮೆ ತಮ್ಮ ಹುದ್ದೆಯಿಂದ ವರ್ಗಾವಣೆಗೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಪದೇ ಪದೇ ವರ್ಗಾವಣೆ ಶಿಕ್ಷೆಗೊಳಗಾಗಿರುವ ಅಶೋಕ್ ಖೇಮ್ಕಾ, ತಮ್ಮ 33 ವರ್ಷದ ಸೇವಾವಧಿಯಲ್ಲಿ ಒಟ್ಟು 57 ಬಾರಿ ವರ್ಗಾವಣೆಗೊಂಡಿದ್ದು, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ತಮ್ಮ ಸೇವಾವಧಿಯುದ್ದಕ್ಕೂ ಆರು ತಿಂಗಳಿಗೊಮ್ಮೆ ವರ್ಗಾವಣೆಗೊಂಡಿರುವ ಎರಡನೆ ಅಧಿಕಾರಿ ಬಹುಶಃ ಅಶೋಕ್ ಖೇಮ್ಕಾ. ಮತ್ತೊಬ್ಬ ಖ್ಯಾತ ಐಎಎಸ್ ಅಧಿಕಾರಿಯಾದ ಪ್ರದೀಪ್ ಕಸ್ಮಿ, ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ಒಟ್ಟು 71 ಬಾರಿ ವರ್ಗಾವಣೆಗೊಳಗಾಗಿದ್ದರು. ಆದರೆ, ತಮ್ಮ ವೈಯಕ್ತಿಕ ಕಾರಣಗಳಿಗಾಗಿ ವರ್ಗಾವಣೆಗೊಳಗಾಗುತ್ತಿದ್ದ ಪ್ರದೀಪ್ ಕಸ್ಮಿಗೆ ಹೋಲಿಸಿದರೆ, ಅಶೋಕ್ ಖೇಮ್ಕಾರ ಸೇವಾವಧಿಯಲ್ಲಿನ ವರ್ಗಾವಣೆಗಳು ವಿಭಿನ್ನವಾಗಿವೆ.
ಅಶೋಕ್ ಖೇಮ್ಕಾ ಐಎಎಸ್ ಅಧಿಕಾರಿಯಾಗಿ ಹರ್ಯಾಣದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ, ಅವರು ಮೂಲತಃ ಪಶ್ಚಿಮ ಬಂಗಾಳ ರಾಜ್ಯದವರು. ಅಶೋಕ್ ಖೇಮ್ಕಾ ಎಪ್ರಿಲ್ 30, 2025ರಲ್ಲಿ ಅವರು ತಮ್ಮ ಸೇವೆಯಿಂದ ನಿವೃತ್ತರಾಗಲಿದ್ದಾರೆ. ತಮ್ಮ ನಿವೃತ್ತಿಗೆ ಇನ್ನು ಕೇವಲ ಐದು ತಿಂಗಳಿದ್ದರೂ, ಅಶೋಕ್ ಖೇಮ್ಕಾ ಮತ್ತೆ ತಮಗೆ ಚಿರಪರಿಚಿತವಿರುವ ಸಾರಿಗೆ ಇಲಾಖೆಗೇ ವರ್ಗಾವಣೆಗೊಂಡಿದ್ದಾರೆ. ಇದಕ್ಕೂ ಮುನ್ನ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಖೇಮ್ಕಾ, ಮತ್ತೆ ಒಂದು ದಶಕದ ಹಿಂದೆ ಸಾರಿಗೆ ಇಲಾಖೆಯಲ್ಲಿ ಹೊಂದಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೇ ಮರಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ದೃಢ ನಿಲುವು ಹೊಂದಿರುವ ಅಶೋಕ್ ಖೇಮ್ಕಾ, ಅದೇ ಕಾರಣಕ್ಕೆ ಹಲವು ಬಾರಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. 2014ರಲ್ಲಿ ಸಾರಿಗೆ ಇಲಾಖೆಯ ಆಯಕ್ತರಾಗಿದ್ದ ಅಶೋಕ್ ಖೇಮ್ಕಾ, ಭಾರಿ ವಾಹನಗಳಿಗೆ ಸುಸ್ಥಿತಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು. ಈ ನಿರ್ಧಾರದ ವಿರುದ್ಧ ಟ್ರಕ್ ಮಾಲಕರು ಮಷ್ಕರ ಹೂಡಿದ್ದರು.
ಕಳೆದ ವರ್ಷ ತಮ್ಮನ್ನು ವಿಚಕ್ಷಣಾ ಇಲಾಖೆಗೆ ನೇಮಿಸುವಂತೆ ಹರ್ಯಾಣ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ, ಅಶೋಕ್ ಖೇಮ್ಕಾ ಮತ್ತೆ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಿದ್ದರು. ನಾನು ನನ್ನ ಉಳಿದ ಸೇವಾವಧಿಯನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮುಡುಪಿಡಲು ಬಯಸುತ್ತೇನೆ ಎಂದು ಅವರು ತಮ್ಮ ಪತ್ರದಲ್ಲಿ ಬಯಕೆ ತೋಡಿಕೊಂಡಿದ್ದರು.
ಖರಗ್ ಪುರ್ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವಿ ಪಡೆದಿರುವ ಅಶೋಕ್ ಖೇಮ್ಕಾ, ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಇದರೊಂದಿಗೆ, ವ್ಯಾಪಾರ ಆಡಳಿತ ಮತ್ತು ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಹಾಗೂ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
ಸೌಜನ್ಯ: news18.com







