“14 ಕುಟುಂಬಗಳ ಈದ್ ಆಚರಣೆ ಹಾಳುಗೆಡಹುವ ಕ್ರಮ”: ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದವರ ಬಂಧನದ ಕುರಿತು IAS ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಟೀಕೆ

ಮುಹಮ್ಮದ್ ಮೊಹ್ಸಿನ್ (Photo: X)
ವಾರಣಾಸಿ: ಗಂಗಾ ನದಿಯಲ್ಲಿ ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಸಂಬಂಧಿಸಿದಂತೆ 14 ಜನರನ್ನು ಬಂಧಿಸಿರುವುದನ್ನು ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಟೀಕಿಸಿದ್ದಾರೆ.
ಬಂಧನ ಕುರಿತ ವರದಿಯನ್ನು ಹಂಚಿಕೊಂಡಿರುವ ಮುಹಮ್ಮದ್ ಮೊಹ್ಸಿನ್, ಕಸ್ಟಡಿಯಲ್ಲಿ ಕಿರುಕುಳ ನೀಡಲು ಮತ್ತು ಎಲ್ಲಾ 14 ಕುಟುಂಬಗಳ ಈದ್ ಆಚರಣೆಯನ್ನು ಹಾಳುಗೆಡವಲು ಈ ರೀತಿ ಮಾಡಲಾಗಿದೆ. ಎಂತಹಾ ಹತಾಶ ವ್ಯವಸ್ಥೆ ಎಂದು ಹೇಳಿದ್ದಾರೆ.
ಗಂಗಾ ನದಿಯಲ್ಲಿ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಮೂಳೆಗಳನ್ನು ನದಿಗೆ ಎಸೆದ ಆರೋಪದ ಮೇಲೆ 14 ಮಂದಿ ಯುವಕರನ್ನು ಬಂಧಿಸಲಾಗಿತ್ತು. ವರದಿಗಳ ಪ್ರಕಾರ, ಪ್ರಕರಣದ ಎಲ್ಲಾ 14 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಮುಹಮ್ಮದ್ ಮೊಹ್ಸಿನ್ ಯಾರು?:
ಮುಹಮ್ಮದ್ ಮೊಹ್ಸಿನ್ ಅವರು ಕರ್ನಾಟಕದ ಹಿರಿಯ IAS ಅಧಿಕಾರಿ. 1996ರ ಬ್ಯಾಚ್ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಬಿಹಾರ ಮೂಲದ ಮೊಹ್ಸಿನ್ ಅವರು ಹಲವು ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದ ತಬ್ಲೀಗಿಗಳನ್ನು ಬೆಂಬಲಿಸಿ ಮೊಹ್ಸಿನ್ ಅವರು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆ ಅವರಿಗೆ ಸರಕಾರ ನೋಟಿಸ್ ಜಾರಿಗೊಳಿಸಿತ್ತು.
‘300ಕ್ಕೂ ತಬ್ಲೀಗಿ ಜಮಾಅತ್ ಹೀರೋಗಳು ದೇಶ ಸೇವೆಗಾಗಿ ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಆದರೆ ‘ಗೋದಿ ಮೀಡಿಯಾ’ ಏನು ಮಾಡುತ್ತಿದೆ? ಈ ಹೀರೋಗಳು ಮಾಡಿದ ಸಮಾಜ ಸೇವೆಯನ್ನು ಇವರು ತೋರಿಸಲ್ಲ’ ಎಂದು ಮೊಹ್ಸಿನ್ ಟ್ವೀಟ್ ಮಾಡಿದ್ದರು.
ಅಲ್ಲದೇ 2019 ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಕ್ಕೆ ಮುಹಮದ್ ಮೊಹ್ಸಿನ್ ಅವರನ್ನು ಚುನಾವಣಾ ಆಯೋಗ ಅಮಾನತು ಮಾಡಿತ್ತು.
1996ರ ಬ್ಯಾಚ್ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಮುಹಮದ್ ಮೊಹ್ಸಿನ್, ವಿಶೇಷ ರಕ್ಷಣಾ ಗುಂಪು ಅಥವಾ ಎಸ್ಪಿಜಿ ಸಿಬ್ಬಂದಿ ಬಗ್ಗೆ ನೀಡಿದ್ದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿಲ್ಲ ಎನ್ನುವ ಕಾರಣ ನೀಡಿ ಚುನಾವಣೆ ಆಯೋಗ ಅಮಾನತು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೊಹ್ಸಿನ್ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯ ಮೊರೆ ಹೋಗಿದ್ದರು. ಸಿಎಟಿ ಮೊಹ್ಸಿನ್ ಅವರ ಅಮಾನತು ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೊಹ್ಸಿನ್ ಅವರು, ಸಾಮಾಜಿಕ ನ್ಯಾಯ ಮತ್ತು ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ದಕ್ಷ ಮತ್ತು ನೇರ ನುಡಿಯ ಅಧಿಕಾರಿಯೆಂದು ಅವರು ಗುರುತಿಸಿಕೊಂಡಿದ್ದಾರೆ.






