Uttar Pradesh | ಐಸ್ ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿ ತಲೆ ಮನೆಗೊಯ್ದ!

ಸಾಂದರ್ಭಿಕ ಚಿತ್ರ | Photo Credit : freepik
ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶನಿವಾರ 25 ವರ್ಷದ ಐಸ್ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿದ ವ್ಯಕ್ತಿಯೊಬ್ಬ, ಕತ್ತು ಸೀಳಿ ರುಂಡವನ್ನು ಬೇರ್ಪಡಿಸಿ ತಲೆಯನ್ನು ಮನೆಗೆ ಒಯ್ದು, ಏನೂ ಆಗಿಲ್ಲ ಎಂಬಂತೆ ಅಡುಗೆ ಮಾಡಲಾರಂಭಿಸಿದ ಘಟನೆ ವರದಿಯಾಗಿದೆ.
ಬಾರಾಬಂಕಿ ಜಿಲ್ಲೆಯ ಪರ್ಸಾವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಬ್ಲೂ ಎಂದು ಗುರುತಿಸಲಾಗಿದ್ದು, ಎಂದಿನಂತೆ ಐಸ್ಕ್ರೀಂ ಮಾರುತ್ತಾ ಪರ್ಸಾವಲ್ ಗ್ರಾಮಕ್ಕೆ ತೆರಳಿದ್ದ. ಐಸ್ಕ್ರೀಮ್ ಮಾರುತ್ತಿದ್ದ ವೇಳೆ ಸ್ಥಳೀಯ ಶಂಕರ್ ಯಾದವ್ ಎಂಬಾತನ ಜತೆಗೆ ವಾಗ್ವಾದ ಆರಂಭವಾಗಿತ್ತು.
ವಾಗ್ವಾದ ತಾರಕಕ್ಕೇರಿ ಶಂಕರ್ ಯಾದವ್, ಸಾರ್ವಜನಿಕರ ಸಮ್ಮುಖದಲ್ಲೇ ಬಬ್ಲೂ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಕತ್ತು ಸೀಳಿ ತಲೆಯನ್ನು ಕತ್ತರಿಸಿದ. ಸ್ಥಳದಿಂದ ತೆರಳುವ ಮುನ್ನ ಶಂಕರ್ ಯಾದವ್, ಬೇರ್ಪಟ್ಟ ತಲೆಯನ್ನು ಅದೇ ಗ್ರಾಮದಲ್ಲಿದ್ದ ತನ್ನ ಮನೆಗೆ ಕೊಂಡೊಯ್ದ. ಮನೆಗೆ ಹೋದ ಬಳಿಕ ಏನೂ ಆಗಿಲ್ಲವೆಂಬಂತೆ ಅಡುಗೆ ಮಾಡಲು ಆರಂಭಿಸಿದ್ದು, ಮನೆಗೆ ತೆರಳಿದ ಪೊಲೀಸರಿಗೆ ಕಂಡುಬಂತು.
ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ತಕ್ಷಣವೇ ಗ್ರಾಮದಲ್ಲಿ ಎಸ್ಪಿ ಅರ್ಪಿತ್ ವಿಜಯವರ್ಗೀಯ ಮಾರ್ಗದರ್ಶನದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಪೊಲೀಸರು ಶಂಕರ್ ಯಾದವ್ ಮನೆಗೆ ತೆರಳಿದರು. ಪೊಲೀಸರು ಮನೆಗೆ ಬಂದಾಗ ಯಾದವ್ ಅಡುಗೆ ಮಾಡುತ್ತಿದ್ದ ಹಾಗೂ ಕತ್ತರಿಸಲ್ಪಟ್ಟ ತಲೆ ಅಲ್ಲೇ ಪಕ್ಕದಲ್ಲಿ ಬಿದ್ದಿತ್ತು.
ಪೊಲೀಸರು ಆರೋಪಿಯನ್ನು ಬಂಧಿಸಿ, ತಲೆ ಹಾಗೂ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಬಬ್ಲೂ ಮೂವರು ಸಹೋದರರ ಪೈಕಿ ಹಿರಿಯರಾಗಿದ್ದು, ಐಸ್ಕ್ರೀಂ ಮಾರಾಟದ ಮೂಲಕ ಕುಟುಂಬದ ಆಧಾರಸ್ತಂಭವಾಗಿದ್ದ. ಈತನಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಜಗಳದ ಕಾರಣ ಬಗ್ಗೆ ತನಿಖೆ ನಡೆಸಲಾಗುತ್ತಿದೆ.






