ರಷ್ಯಾದಿಂದ ಅಮೆರಿಕ ತೈಲ ಖರೀದಿ ಮಾಡಬಹುದಾದರೆ ಭಾರತಕ್ಕೆ ಆ ಹಕ್ಕು ಏಕಿಲ್ಲ? : ಪುಟಿನ್

PC: x.com/IndiaToday
ಮಾಸ್ಕೊ: ರಷ್ಯಾದಿಂದ ತೈಲ ಖರೀದಿ ಮಾಡುವ ಹಕ್ಕನ್ನು ಅಮೆರಿಕ ಹೊಂದಿದೆ ಎಂದಾದರೆ, ಅದೇ ಸೌಲಭ್ಯ ಭಾರತಕ್ಕೆ ಏಕಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಪ್ರಶ್ನಿಸಿದ್ದಾರೆ.
ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವ ಸಂಬಂಧ ಟ್ರಂಪ್ ಇತ್ತೀಚೆಗೆ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಗಮನ ಸೆಳೆದಾಗ ಪುಟಿನ್ ಮೇಲಿನಂತೆ ಪ್ರಶ್ನಿಸಿದರು.
"ರಷ್ಯಾದಿಂದ ಭಾರತ ಇಂಧನ ಸಂಪನ್ಮೂಲಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ, ಈ ಮೊದಲೇ ಬಹಿರಂಗವಾಗಿ ಒಮ್ಮೆ ಉಲ್ಲೇಖಿಸಿದ್ದೇನೆ. ಅಮೆರಿಕ ಸ್ವತಃ ಈಗಲೂ ತನ್ನ ಅಣು ವಿದ್ಯುತ್ ಸ್ಥಾವರಗಳಿಗೆ ನಮ್ಮಿಂದ ಅಣ್ವಸ್ತ್ರ ಇಂಧನವನ್ನು ಖರೀದಿಸುತ್ತಿದೆ" ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.
ಎರಡು ದಿನಗಳ ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿದ ಪುಟಿನ್, ಅಮೆರಿಕ ತನ್ನ ರಿಯಾಕ್ಟರ್ಗಳಿಗೆ ಯುರೇನಿಯಂ ಖರೀದಿಸಬಹುದಾದರೆ, ಭಾರತಕ್ಕೂ ಇಂಥದ್ದೇ ಸೌಲಭ್ಯ ಇರಬೇಕು ಎಂದು ಪ್ರತಿಪಾದಿಸಿದರು.
"ಅದು ಕೂಡಾ ಇಂಧನ; ಅಮೆರಿಕದ ರಿಯಾಕ್ಟರ್ಗ ಳಲ್ಲಿ ಕಾರ್ಯಾಚರಣೆಗೆ ಬೇಕಾಗಿರುವ ಯುರೇನಿಯಂ. ಅಮೆರಿಕಕ್ಕೆ ಇಂಧನ ಖರೀದಿಸುವ ಹಕ್ಕು ಇದ್ದರೆ, ಭಾರತಕ್ಕೆ ಅಂಥದ್ದೇ ಸೌಲಭ್ಯ ಏಕೆ ಇರಬಾರದು" ಎಂದು ಪುಟಿನ್ ಪ್ರಶ್ನಿಸಿದರು.
ರಷ್ಯಾದಿಂದ ತೈಲ ಖರೀದಿ ಮಾಡುವ ಭಾರತದ ಮೇಲೆ ಟ್ರಂಪ್ ಶೇಕಡ 25ರಷ್ಟು ಹೆಚ್ಚವರಿ ಸುಂಕ ವಿಧಿಸಿದ್ದು, ಆಗಸ್ಟ್ ನಲ್ಲಿ ಒಟ್ಟು ಸುಂಕವನ್ನು ಶೇಕಡ 50ಕ್ಕೆ ಏರಿಸಿದ್ದಾರೆ. ಇದು ಯಾವುದೇ ದೇಶಗಳಿಗೆ ವಿಧಿಸಿದ್ದಕ್ಕಿಂತ ಅಧಿಕ ಸುಂಕವಾಗಿದೆ.







