ಐಐಟಿ-ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಸಂಸ್ಥೆಯ ಪ್ರಾಧ್ಯಾಪಕರೊಬ್ಬರ ವಿರುದ್ಧ ಎಫ್ಐಆರ್
ಮೃತದೇಹ ಪಡೆಯಲು ನಿರಾಕರಿಸಿ ಪ್ರತಿಭಟಿಸಿದ ವಿದ್ಯಾರ್ಥಿಯ ಪೋಷಕರು

PC: x.com/IndiaToday
ಮುಂಬೈ: ಐಐಟಿ-ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಪ್ರಾಧ್ಯಾಪಕರೊಬ್ಬರನ್ನು ಆರೋಪಿಯನ್ನಾಗಿ ಹೆಸರಿಸಿ ಎಫ್ಐಆರ್ ದಾಖಲಿಸಲಾಗಿದೆ. ಮೃತ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರಿಗೆ ಜಾತಿ ನಿಂದನೆ ಹಾಗೂ ಕಿರುಕುಳ ನೀಡಲಾಗಿತ್ತು ಎಂದು ಅವರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊವಾಯ್ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ತಡರಾತ್ರಿ ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ (ಕ್ರೈಂ ಬ್ರಾಂಚ್) ವರ್ಗಾಯಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಐಐಟಿ-ಬಾಂಬೆ ಆವರಣದಲ್ಲಿ ಸಂಭವಿಸಿದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಶುಕ್ರವಾರ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಡೆದ ಪರೀಕ್ಷೆಯ ವೇಳೆ, ಎನರ್ಜಿ ಸೈನ್ಸ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ (20) ಮೊಬೈಲ್ ಫೋನ್ ಬಳಸುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಉತ್ತರಗಳನ್ನು ಪಡೆಯುವ ಉದ್ದೇಶದಿಂದ ಆತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಎಐ (AI) ವೇದಿಕೆಗೆ ಅಪ್ಲೋಡ್ ಮಾಡಿದ್ದ ಎಂದು ಆರೋಪಿಸಲಾಗಿದೆ.
ಇದಾದ ಬಳಿಕ ಸಾಹಿಲ್ ಮೃತದೇಹ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾಗಿತ್ತು.
ಎನರ್ಜಿ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಸೂರ್ಯನಾರಾಯಣ ಡೂಲ್ಲಾ ಅವರ ಹೆಸರನ್ನು ಎಫ್ಐಆರ್ನಲ್ಲಿ ಆರೋಪಿಯಾಗಿ ಹೆಸರಿಸಲಾಗಿದೆ. ಅವರು ಪರೀಕ್ಷೆಯ ಮೇಲ್ವಿಚಾರಕರಾಗಿದ್ದರು ಎಂದು ತಿಳಿದುಬಂದಿದೆ. ಡೂಲ್ಲಾ ಅವರು ಈ ಹಿಂದೆ ಸಂಸ್ಥೆಯ ಡೀನ್ ಆಫ್ ಸ್ಟೂಡೆಂಟ್ ಅಫೇರ್ಸ್ ಆಗಿಯೂ ಸೇವೆ ಸಲ್ಲಿಸಿದ್ದರು.
ಎಫ್ಐಆರ್ನಲ್ಲಿ ಪ್ರೊಫೆಸರ್ ಡೂಲ್ಲಾ ಅವರೊಂದಿಗೆ “ಇತರ ಹಿರಿಯ ಅಧಿಕಾರಿಗಳು” ಹಾಗೂ “ಸಂಬಂಧಪಟ್ಟ ಇತರ ಅಧಿಕಾರಿಗಳು” ಎಂದೂ ಉಲ್ಲೇಖಿಸಲಾಗಿದೆ.
ಪ್ರಾಧ್ಯಾಪಕರು ಸಾಹಿಲ್ ನನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕರೆದೊಯ್ದು, ಅಮಾನತು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆತನ ಪೋಷಕರು ಹಾಗೂ ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ, ಸಂಸ್ಥೆಯು ತನ್ನ ಹೇಳಿಕೆಯಲ್ಲಿ “ವಿದ್ಯಾರ್ಥಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ” ಎಂದು ತಿಳಿಸಿದೆ.
ಎಫ್ಐಆರ್ ದಾಖಲಾದ ಬಗ್ಗೆ ಪ್ರತಿಕ್ರಿಯಿಸಿದ ಐಐಟಿ-ಬಾಂಬೆ ನಿರ್ದೇಶಕ ಪ್ರೊಫೆಸರ್ ಶಿರೀಶ್ ಕೇದಾರೆ, ಕ್ಯಾಂಪಸ್ ನ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಅಥವಾ ಆಡಳಿತ ಹಾಗೂ ಪ್ರಾಧ್ಯಾಪಕರ ಮಟ್ಟದಲ್ಲಿ ಯಾವುದೇ ಜಾತಿ ಆಧಾರಿತ ತಾರತಮ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಈ ಪ್ರಕರಣದಲ್ಲಿಯೂ ಅಂತಹ ಯಾವುದೇ ತಾರತಮ್ಯ ನಡೆದಿಲ್ಲ. ವಾಸ್ತವವಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯ ಜಾತಿ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ ಮತ್ತು ಅದು ಯಾರಿಗೂ ಲಭ್ಯವಿರುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ಮೃತದೇಹ ಪಡೆಯಲು ನಿರಾಕರಿಸಿ ಪ್ರತಿಭಟಿಸಿದ ವಿದ್ಯಾರ್ಥಿಯ ಪೋಷಕರು
ಈ ಮಧ್ಯೆ, ಶನಿವಾರ ರಾಜಾವಾಡಿ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಿಂದ ಮಗನ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ ವಿದ್ಯಾರ್ಥಿಯ ಪೋಷಕರು ಸುಮಾರು ಏಳು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
“ಆರೋಪಿಗಳನ್ನು ಬಂಧಿಸುವವರೆಗೆ ನಾನು ನನ್ನ ಮಗನ ಅಂತ್ಯಕ್ರಿಯೆ ನಡೆಸುವುದಿಲ್ಲ. ಸಾಹಿಲ್ ನಮಗೆ ಒಬ್ಬನೇ ಮಗ,” ಎಂದು ವಿದ್ಯಾರ್ಥಿಯ ತಂದೆ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರವೀಂದ್ರ ಅವರು ಬಹುಪಯೋಗಿ ಸಹಕಾರಿ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಸೊನಾಲಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ದೂರಿನ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಕುಟುಂಬಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರು.
“ಹಿಂದೆಯೂ ಹಲವು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ವರ್ಷವೊಂದರಲ್ಲೇ ಮೂರು ಪ್ರಕರಣಗಳು ವರದಿಯಾಗಿವೆ. ಆದರೆ ಸಂಸ್ಥೆ ಅಥವಾ ಅದರ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಪ್ರಕರಣಗಳು ಎಂದಿಗೂ ತಾರ್ಕಿಕ ಅಂತ್ಯ ಕಾಣುವುದಿಲ್ಲ, ಯಾವುದೇ ಶಾಶ್ವತ ಪರಿಹಾರವೂ ಸಿಗುವುದಿಲ್ಲ. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಆದರೆ ಬೇರೆ ಯಾವುದೇ ಮಗು ಹೀಗೆ ಬಲಿಯಾಗಬಾರದು” ಎಂದು ರವೀಂದ್ರ ಹೇಳಿದರು.
ಅಂತಿಮವಾಗಿ, ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ವಹಿಸಲಾಗಿದ್ದು, ಎಸಿಪಿ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆ ಎಂದು ಪೊಲೀಸರು ಭರವಸೆ ನೀಡಿದ ಬಳಿಕ, ತಡರಾತ್ರಿ ಕುಟುಂಬಸ್ಥರು ಮೃತದೇಹವನ್ನು ಪಡೆದುಕೊಂಡರು.






