ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ | 18 ಬೇಡಿಕೆಗಳ ಕುರಿತು ಆಡಳಿತ ಮಂಡಳಿ –ಪ್ರತಿಭಟನಾಕಾರರ ಸಭೆ

ಸಾಹಿಲ್ (Photo: NDTV)
ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್ ನಲ್ಲಿ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಾಕೋಡೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿವಾದ ತೀವ್ರಗೊಂಡಿದ್ದು, ವಿದ್ಯಾರ್ಥಿಗಳ 18 ಬೇಡಿಕೆಗಳ ಕುರಿತು ಸಂಸ್ಥೆಯ ಆಡಳಿತ ಮಂಡಳಿಯು ರವಿವಾರ ರಾತ್ರಿ ಪ್ರತಿಭಟನಾಕಾರರೊಂದಿಗೆ ಸಭೆ ನಡೆಸಿದೆ.
22 ವರ್ಷದ ಸಾಹಿಲ್ ವಾಕೋಡೆ ಅವರು ಕಳೆದ ಶುಕ್ರವಾರ ಕ್ಯಾಂಪಸ್ ನ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೆಮಿಸ್ಟರ್ ಮಧ್ಯದ ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಮತ್ತು ChatGPT ಬಳಸುತ್ತಿದ್ದಾಗ ಸಿಕ್ಕಿಬಿದ್ದ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿತ್ತು.
ವಿದ್ಯಾರ್ಥಿಯ ಸಾವಿಗೆ ಯಾರು ಕಾರಣ ಎಂಬ ವಿಚಾರದಲ್ಲಿ ಪ್ರತಿಭಟನಾಕಾರರು ಮತ್ತು ಆಡಳಿತ ಮಂಡಳಿ ವಿಭಿನ್ನ ನಿಲುವು ತಳೆದಿರುವುದರಿಂದ ಕ್ಯಾಂಪಸ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ವಿದ್ಯಾರ್ಥಿಯೊಬ್ಬರು ‘ಅನಧಿಕೃತವಾಗಿ ಸ್ಮಾರ್ಟ್ಫೋನ್ ಹೊಂದಿದ್ದು, ಅದನ್ನು ಬಳಸುತ್ತಿರುವುದು’ ಪತ್ತೆಯಾದ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕ ಸೂರ್ಯನಾರಾಯಣ ದೂಲ್ಲಾ ಅವರು ಸಂಸ್ಥೆಯ ನಿಯಮಾವಳಿಯಂತೆ ಕಾರ್ಯನಿರ್ವಹಿಸಿದ್ದರು ಎಂದು ಐಐಟಿ ಬಾಂಬೆ ಫ್ಯಾಕಲ್ಟಿ ಫೋರಮ್ ಹೇಳಿದೆ.
ಮಹಾರಾಷ್ಟ್ರದ ಯವತ್ಮಾಲ್ ಮೂಲದ ವಾಕೋಡೆ ಅವರ ಸಾವಿಗೆ ಫ್ಯಾಕಲ್ಟಿ ಫೋರಮ್ ಸಂತಾಪ ಸೂಚಿಸಿದೆ. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಯ ವಿರುದ್ಧದ ಕ್ರಮಕ್ಕೆ ಸಂಬಂಧಿಸಿದ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುವಾಗ ಪ್ರಾಧ್ಯಾಪಕರು ಸಂಸ್ಥೆಯ ನಿಗದಿತ ಕಾರ್ಯವಿಧಾನವನ್ನೇ ಅನುಸರಿಸಿದ್ದರು ಎಂದು ಫೋರಮ್ ತಿಳಿಸಿದೆ.
ಪ್ರಾಧ್ಯಾಪಕರು ತಮ್ಮ ಶೈಕ್ಷಣಿಕ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಿದ್ದಾರೆ. ಅವರ ವಿರುದ್ಧ ಮಾಡಲಾಗುತ್ತಿರುವ ಹೇಳಿಕೆಗಳು ಅವರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಕಳವಳವಿದೆ ಎಂದು ಫ್ಯಾಕಲ್ಟಿ ಫೋರಮ್ ಹೇಳಿದೆ.
ಆದರೆ, ವಾಕೋಡೆ ಅವರು ಕ್ಯಾಂಪಸ್ ನಲ್ಲಿ ಸಾಂಸ್ಥಿಕ ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯಕ್ಕೆ ಒಳಗಾಗಿದ್ದರು. ಇದರಿಂದಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಯ ಕುಟುಂಬ ಆರೋಪಿಸಿದೆ.
ತಾರತಮ್ಯದ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪೋಷಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
18 ಬೇಡಿಕೆಗಳ ಕುರಿತು ಚರ್ಚೆ
ರವಿವಾರ ರಾತ್ರಿ ಐಐಟಿ ಬಾಂಬೆ ಆಡಳಿತ ಮಂಡಳಿಯು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರ 18 ಬೇಡಿಕೆಗಳ ಕುರಿತು ಚರ್ಚಿಸಿತು.
ಶೈಕ್ಷಣಿಕ ಸಮಿತಿಗಳಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಖಚಿತಪಡಿಸುವುದು, ಕ್ಯಾಂಪಸ್ ನಲ್ಲಿ ನಡೆದ ನಾಲ್ಕು ಆತ್ಮಹತ್ಯೆ ಪ್ರಕರಣಗಳ ಕುರಿತು ಸ್ವತಂತ್ರ ತನಿಖೆ ನಡೆಸುವುದು ಮತ್ತು ಪ್ರಾಧ್ಯಾಪಕರಿಗೆ ಮಾನಸಿಕ ಆರೋಗ್ಯ ಕಾರ್ಯಾಗಾರಗಳನ್ನು ನಡೆಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ.
ಈ ಬೇಡಿಕೆಗಳ ಕುರಿತು ಸೋಮವಾರ ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆಯಿದೆ ಎಂದು ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.
ತಡರಾತ್ರಿಯ ಸಭೆಯ ಹೊರತಾಗಿಯೂ, ‘ಇಂಡಿಯಾ ಅಗೇನ್ಸ್ಟ್ ಕ್ಯಾಸ್ಟಿಸಮ್’ (ಜಾತಿ ಪದ್ಧತಿಯ ವಿರುದ್ಧ ಭಾರತ) ಬ್ಯಾನರ್ ಅಡಿಯಲ್ಲಿ ಸೋಮವಾರ ಐಐಟಿ ಬಾಂಬೆಯ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಜಾತಿ ಪದ್ಧತಿಗೆ ಸಂಬಂಧಿಸಿದ ಸನ್ನಿವೇಶಗಳಲ್ಲಿ ಈ ಹಿಂದೆ ನಡೆದಿರುವ ಇತರ ಆತ್ಮಹತ್ಯೆ ಪ್ರಕರಣಗಳನ್ನೂ ಪ್ರತಿಭಟನಾಕಾರರು ಪ್ರಸ್ತಾಪಿಸಿದ್ದಾರೆ.






