"ಟೋಲ್ ಪ್ಲಾಝಾಗಳಲ್ಲಿ ಅಕ್ರಮವಾಗಿ ಟೋಲ್ ವಸೂಲಿ": ಉತ್ತರ ಪ್ರದೇಶ ಸರಕಾರಕ್ಕೆ ಮತ್ತೊಂದು ಪತ್ರ ಬರೆದ ಕೇಂದ್ರ ಸಚಿವೆ ಅನುಪ್ರಿಯ

ಅನುಪ್ರಿಯ ಪಟೇಲ್ | PC : PTI
ಲಕ್ನೊ: ರಾಜ್ಯ ಸರಕಾರಿ ಉದ್ಯೋಗ ನೇಮಕಾತಿಗಳಲ್ಲಿ ಒಬಿಸಿ ಮೀಸಲಾತಿ ಜಾರಿಯ ಕುರಿತು ದನಿಯೆತ್ತಿ ಸುದ್ದಿಯಾಗಿದ್ದ ಕೇಂದ್ರ ಸಚಿವ ಹಾಗೂ ಬಿಜೆಪಿ ಮೈತ್ರಿಕೂಟ ಪಕ್ಷವಾದ ಅಪ್ನಾ ದಳ (ಸೋನೇವಾಲ್) ಮುಖ್ಯಸ್ಥ ಅನುಪ್ರಿಯ ಪಟೇಲ್, ಬುಧವಾರ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಉತ್ತರ ಪ್ರದೇಶ ಸರಕಾರಕ್ಕೆ ಮತ್ತೊಂದು ಪತ್ರ ಬರೆದಿದ್ದು, ಮಿರ್ಝಾಪುರ ರಸ್ತೆಯಲ್ಲಿನ ಟೋಲ್ ಪ್ಲಾಝಾ ಬಳಿ ಅಕ್ರಮಗಳು ನಡೆಯುತ್ತಿದ್ದು, ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಕೈಗಾರಿಕಾಭಿವೃದ್ಧಿ ಸಚಿವ ನಂದ್ ಗೋಪಾಲ್ ಗುಪ್ತ ನಂದಿ, ಅನುಪ್ರಿಯ ಪಟೇಲ್ರ ಆರೋಪವನ್ನು ಆಧಾರರಹಿತ ಎಂದು ಅಲ್ಲಗಳೆದಿದ್ದಾರೆ. "ಪ್ರಶ್ನೆಗೊಳಗಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅನಧಿಕೃತ ಟೋಲ್ ಸಂಗ್ರಹ ನಡೆಯುತ್ತಿಲ್ಲ" ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಹಿಂದೆ ವಾರಣಾಸಿ-ಶಕ್ತಿನಗರ್ ಮಾರ್ಗ: ಫತ್ತೇಪುರ್ (4.680 ಕಿಮೀ), ಲೋಧಿ (68.100 ಕಿಮೀ) ಹಾಗೂ ಮಾಲೊಘಾಟ್ (108.940 ಕಿಮೀ)ಗಳಲ್ಲಿ ನಿರ್ಮಾಣಗೊಂಡಿರುವ ಎಲ್ಲ ಟೋಲ್ ಪ್ಲಾಝಾಗಳು ನಿಯಮಾವಳಿಯಂತೆಯೇ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅವರು ತಮ್ಮ ಪತ್ರದಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಇದಕ್ಕೂ ಮುನ್ನ, ಜೂನ್ 27ರಂದು ಮುಖ್ಯಮಂತ್ರಿ ಆದಿತ್ಯನಾಥ್ಗೆ ಪತ್ರ ಬರೆದಿದ್ದ ಅನುಪ್ರಿಯ ಪಟೇಲ್, ರಾಜ್ಯ ಸರಕಾರದ ಉದ್ಯೋಗ ನೇಮಕಾತಿಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾಗಿದ್ದ ಹುದ್ದೆಗಳು ಮೀಸಲು ರಹಿತವಾಗಿದ್ದರಿಂದ ಈ ಪ್ರವರ್ಗಗಳ ಅಭ್ಯರ್ಥಿಗಳು ಆಯ್ಕೆಗೊಂಡಿಲ್ಲ ಎಂದು ಆರೋಪಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶ ಸರಕಾರ, ಉದ್ಯೋಗ ನೇಮಕಾತಿಯ ಸಂದರ್ಭದಲ್ಲಿ ಖಾಲಿ ಉಳಿದಿದ್ದ ಮೀಸಲು ಹುದ್ದೆಗಳನ್ನು ಮೀಸಲು ರಹಿತ ಹುದ್ದೆಗಳನ್ನಾಗಿ ಪರಿವರ್ತಿಸಿಲ್ಲ. ಬದಲಿಗೆ, ಈ ಹುದ್ದೆಗಳಿಗೆ ಮುಂದಿನ ನೇಮಕಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ಭರ್ತಿ ಮಾಡಲಾಗುವುದು ಎಂದು ಸ್ಪಷ್ಟೀಕರಣ ನೀಡಿತ್ತು.







