‘SIR ಜಾರಿ ಚುನಾವಣಾ ಆಯೋಗದ ನಿರ್ಧಾರವಲ್ಲ’: RTI ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಆರೋಪ

ಅಂಜಲಿ ಭಾರದ್ವಾಜ್ | Photo Credit : thehindu.com
ಹೊಸದಿಲ್ಲಿ: “ದೇಶದ ನೂರು ಕೋಟಿ ನಾಗರಿಕರ ಮತದಾನದ ಹಕ್ಕಿನ ಮೇಲೆ ನೇರ ಪರಿಣಾಮ ಬೀರುವ ವಿಶೇಷ ತೀವ್ರ ಪರಿಷ್ಕರಣೆ ಅಂದರೆ SIR ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಸ್ವತಃ ಚುನಾವಣಾ ಆಯೋಗವೇ ತೆಗೆದುಕೊಂಡಿಲ್ಲ ಎಂದು ಆಯೋಗದ ಉನ್ನತ ಅಧಿಕಾರಿಯೇ ಲಿಖಿತವಾಗಿ ಒಪ್ಪಿಕೊಂಡಿದ್ದಾರೆ” ಎಂದು ಖ್ಯಾತ ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಬಹಿರಂಗಪಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದೀರ್ಘ ಭಾಷಣ ಮಾಡಿದ ಅವರು, ಭಾರತದ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಸಾಂಸ್ಥಿಕ ಸ್ವಾಯತ್ತತೆಯ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಾಂವಿಧಾನಿಕವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗದ ಮಹತ್ವದ ಆಡಳಿತಾತ್ಮಕ ತೀರ್ಮಾನಗಳ ಹಿಂದೆ ಅಡಗಿರುವ ನಿಗೂಢತೆಯಿದೆ. “ಚುನಾವಣಾ ಆಯೋಗವೇ ಈ ತೀರ್ಮಾನ ಕೈಗೊಳ್ಳದಿದ್ದರೆ, ನೂರು ಕೋಟಿ ಭಾರತೀಯರ ಭವಿಷ್ಯವನ್ನು ನಿರ್ಣಯಿಸುವ ಈ ತೀರ್ಮಾನವನ್ನು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ತೆಗೆದುಕೊಳ್ಳಲಾಯಿತೇ ಅಥವಾ ಗೃಹ ಸಚಿವಾಲಯದಲ್ಲಿ ತೆಗೆದುಕೊಳ್ಳಲಾಯಿತೇ?” ಎಂದು ಅಂಜಲಿ ನೇರವಾಗಿ ಪ್ರಶ್ನಿಸಿದ್ದಾರೆ.
ಚುನಾವಣಾ ಆಯುಕ್ತರ ನೇಮಕಾತಿಯ ಮೇಲೆ ಸರಕಾರದ ಹಿಡಿತವನ್ನು ತಡೆಯಲು ನ್ಯಾಯಾಂಗ ಕೈಗೊಂಡ ತೀರ್ಪನ್ನು ಸರಕಾರ ನಿಷ್ಕ್ರಿಯಗೊಳಿಸಿರುವುದನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. “ಅನೂಪ್ ಬರನ್ವಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಚುನಾವಣಾ ಆಯುಕ್ತರ ನೇಮಕಕ್ಕೆ ಪ್ರಧಾನಮಂತ್ರಿ, ವಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಮೂವರು ಸದಸ್ಯರ ಸ್ವತಂತ್ರ ನೇಮಕಾತಿ ಸಮಿತಿಯನ್ನು ಸೂಚಿಸಲಾಗಿತ್ತು.
ಆದರೆ ಕೇಂದ್ರ ಸರಕಾರವು ತಕ್ಷಣವೇ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಿ, ಮುಖ್ಯ ನ್ಯಾಯಮೂರ್ತಿಗಳನ್ನು ಸಮಿತಿಯಿಂದ ಹೊರಗಿಟ್ಟು, ಅವರ ಜಾಗದಲ್ಲಿ ಕೇಂದ್ರ ಸಂಪುಟ ಸಚಿವರೊಬ್ಬರನ್ನು ಸೇರಿಸಿಕೊಂಡಿತು. ಇದರ ಮೂಲಕ ನೇಮಕಾತಿಯಲ್ಲಿ ಕಾರ್ಯಾಂಗದ ಪೂರ್ಣ ಆಧಿಪತ್ಯವನ್ನು ಮರಳಿ ಸ್ಥಾಪಿಸಲಾಯಿತು” ಎಂದು ಅಂಜಲಿ ಹೇಳಿದರು. ಈ ಕಾಯ್ದೆಯು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆಯಾಗಿದ್ದು, ಈ ಕುರಿತು ಸಲ್ಲಿಸಲಾದ ಅರ್ಜಿಯು 2023ರಿಂದ ನ್ಯಾಯಾಲಯದಲ್ಲಿ ಯಾವುದೇ ತೀರ್ಮಾನವಾಗದೇ ಬಾಕಿ ಉಳಿದಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿರುವ SIR ಪ್ರಕ್ರಿಯೆಯಿಂದ ಕೋಟ್ಯಂತರ ಮತದಾರರು ಪಟ್ಟಿಯಿಂದ ಹೊರಬಿದ್ದಿರುವ ಕುರಿತು ವಿವರಣೆ ನೀಡಿದ ಅವರು, “ಇಲ್ಲಿಯವರೆಗೆ ಸುಮಾರು 6.5 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದ್ದು, ಈ ಸಂಖ್ಯೆಯು ಶೀಘ್ರದಲ್ಲೇ 10 ಕೋಟಿಗೆ ತಲುಪುವ ಅಂದಾಜಿದೆ. ಅಂದರೆ, ಸುಮಾರು 10 ಕೋಟಿ ನಾಗರಿಕರು ತಮ್ಮ ಸಾಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಪ್ರಕ್ರಿಯೆಯನ್ನು ಕೈಗೊಳ್ಳಲು ಆಯೋಗಕ್ಕಿದ್ದ ಕಾರಣಗಳು ಮತ್ತು ಈ ಕುರಿತು ನಡೆಸಿದ ಸಮಾಲೋಚನೆಗಳ ದಾಖಲೆಗಳನ್ನು ಕೋರಿ ಸಲ್ಲಿಸಲಾದ RTI ಅರ್ಜಿಗಳಿಗೆ ಆಯೋಗವು “ಯಾವುದೇ ಭೌತಿಕ ದಾಖಲೆಗಳು ಲಭ್ಯವಿಲ್ಲ” ಎಂದು ಉತ್ತರ ನೀಡಿದೆ. ಮೇಲ್ಮನವಿ ವಿಚಾರಣೆಯಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿಯವರು “SIR ನಡೆಸುವ ತೀರ್ಮಾನವನ್ನು ಚುನಾವಣಾ ಆಯೋಗದ ಒಳಗಡೆ ತೆಗೆದುಕೊಳ್ಳಲಾಗಿಲ್ಲ” ಎಂದು ಲಿಖಿತವಾಗಿ ನೀಡಿದ್ದನ್ನು ಉಲ್ಲೇಖಿಸಿ, ಆಯೋಗದ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ SIR ಜಾರಿಗೆ ತಂದ ವಿಧಾನವನ್ನು ವಿವರಿಸಿದ ಅವರು, “ಬಂಗಾಳದಲ್ಲಿ ಮತದಾರರು ತಮ್ಮ ಪೌರತ್ವ ಸಾಬೀತುಪಡಿಸಲು 2002ರ ಮತದಾರರ ಪಟ್ಟಿಯೊಂದಿಗೆ ತಮ್ಮ ದಾಖಲೆಗಳನ್ನು ಹೋಲಿಸಿಕೊಳ್ಳುವಂತೆ ಸೂಚಿಸಲಾಯಿತು. ಹೆಸರು ಅಥವಾ ತಂದೆಯ ಹೆಸರಿನ ಕಾಗುಣಿತದಲ್ಲಿದ್ದ ಸಣ್ಣಪುಟ್ಟ ವ್ಯತ್ಯಾಸಗಳ ಆಧಾರದ ಮೇಲೆ 1.36 ಕೋಟಿ ಜನರಿಗೆ ನೋಟಿಸ್ ಕಳುಹಿಸಲಾಯಿತು. ಈ ಹೆಸರುಗಳನ್ನು ರಹಸ್ಯ ಗಣಕೀಯ ಆಲ್ಗರಿದಮ್ ಬಳಸಿ ಆಯ್ಕೆ ಮಾಡಲಾಗಿತ್ತು ಮತ್ತು ಆ ಆಲ್ಗರಿದಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ” ಎಂದಿದ್ದಾರೆ.
“ಕೊನೆಗೆ ಈ ಪಟ್ಟಿಯಲ್ಲಿದ್ದ 27 ಲಕ್ಷ ಜನರಿಗೆ ತಮ್ಮ ಅಹವಾಲು ಸಲ್ಲಿಸಲು ಕನಿಷ್ಠ ಅವಕಾಶವನ್ನೂ ನೀಡದೆ ಮತದಾನದ ಹಕ್ಕಿನಿಂದ ವಂಚಿಸಲಾಯಿತು. ಇವರೆಲ್ಲರೂ ಆಧಾರ್, ಪಡಿತರ ಚೀಟಿ ಮತ್ತು ಪಾಸ್ಪೋರ್ಟ್ ಹೊಂದಿದ್ದರೂ, ಚುನಾವಣೆ ಮುಗಿಯುವವರೆಗೆ ಟ್ರಿಬ್ಯೂನಲ್ ಗಳಲ್ಲಿ ವಿಚಾರಣೆ ನಡೆಸದೆ ಅವರನ್ನು ಹೊರಗಿಡಲಾಯಿತು. ಬಂಗಾಳದ ಹಲವು ಕ್ಷೇತ್ರಗಳಲ್ಲಿ ಈ ರೀತಿ ಅಳಿಸಿಹಾಕಲಾದ ಮತಗಳ ಸಂಖ್ಯೆಯು ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತಲೂ ಹೆಚ್ಚಾಗಿತ್ತು” ಎಂದು ಅವರು ಪ್ರಮುಖ ಅಂಕಿಅಂಶಗಳನ್ನು ಮಂಡಿಸಿದ್ದಾರೆ.
ಚುನಾವಣಾ ಪಾರದರ್ಶಕತೆ ಮತ್ತು ಹರಿಯಾಣ ಚುನಾವಣೆಯ ಪ್ರಕರಣವನ್ನು ಉಲ್ಲೇಖಿಸಿದ ಅವರು, “ವಿಪಕ್ಷ ನಾಯಕರು ಹರಿಯಾಣದಲ್ಲಿ 25 ಲಕ್ಷ ನಕಲಿ ಮತದಾರರನ್ನು ಪತ್ತೆಹಚ್ಚಿ ದೂರು ನೀಡಿದಾಗ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ತಕ್ಷಣವೇ ಸರ್ವಪಕ್ಷ ಸಭೆ ಕರೆದು ತನಿಖೆ ನಡೆಸಬೇಕಿತ್ತು. ಆದರೆ, ಆಯೋಗವು ದೂರುದಾರರಿಂದ ಪ್ರಮಾಣಪತ್ರ ಕೇಳುವ ತಾಂತ್ರಿಕ ನೆಪಗಳ ಹಿಂದೆ ಅಡಗಿಕೊಂಡಿತು” ಎಂದು ಅಂಜಲಿ ಆರೋಪಿಸಿದ್ದಾರೆ.
ಮತಗಟ್ಟೆಯ CCTV ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲು ಮನವಿ ಮಾಡಿದಾಗ ಮುಖ್ಯ ಚುನಾವಣಾ ಆಯುಕ್ತರು ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು, “CCTV ದೃಶ್ಯಾವಳಿಗಳನ್ನು ನೀಡಿದರೆ ದೇಶದ ಸೊಸೆಯಂದಿರು ಮತ್ತು ಹೆಣ್ಣುಮಕ್ಕಳ ಗೌಪ್ಯತೆಗೆ ಧಕ್ಕೆಯಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಬಾಲಿಶ ಸಮರ್ಥನೆ ನೀಡಿದರು. ಮತಗಟ್ಟೆಗಳಲ್ಲಿ CCTV ಕ್ಯಾಮೆರಾಗಳನ್ನು ಅಳವಡಿಸುವುದು ಖಾಸಗಿ ವೀಕ್ಷಣೆಗಲ್ಲ, ಬದಲಿಗೆ ಚುನಾವಣಾ ಅಕ್ರಮಗಳನ್ನು ತಡೆಯಲು ಎಂಬ ಸಣ್ಣ ಸತ್ಯವನ್ನೂ ಆಯೋಗ ಮರೆತಿದೆ” ಎಂದು ಅವರು ಹೇಳಿದ್ದಾರೆ.
ಮತದಾನದ ಪ್ರಮಾಣದಲ್ಲಿ ಕಂಡುಬರುವ ಅಸಾಧಾರಣ ಹೆಚ್ಚಳ ಮತ್ತು ‘ಫಾರ್ಮ್ 17ಸಿ’ ಗೌಪ್ಯತೆಯ ಕುರಿತು ಮತದಾರರನ್ನು ಎಚ್ಚರಿಸಿದ ಅಂಜಲಿ ಭಾರದ್ವಾಜ್, “ಮತದಾನ ಮುಗಿದ ದಿನದ ಕೊನೆಯಲ್ಲಿ ಆಯೋಗ ಬಿಡುಗಡೆ ಮಾಡುವ ಶೇಕಡಾವಾರು ಪ್ರಮಾಣಕ್ಕೂ, ಕೆಲವು ದಿನಗಳ ನಂತರ ಪ್ರಕಟಿಸುವ ಅಂತಿಮ ಮತದಾನದ ಪ್ರಮಾಣಕ್ಕೂ ನಡುವೆ ಬೃಹತ್ ವ್ಯತ್ಯಾಸವಿರುತ್ತದೆ.
2024ರ ಒಡಿಶಾ ಚುನಾವಣೆಯಲ್ಲಿ ಸ್ವತಃ ಬಿಜು ಜನತಾ ದಳ (BJD) ಆಯೋಗಕ್ಕೆ ಪತ್ರ ಬರೆದು, ಕೆಲವು ಕ್ಷೇತ್ರಗಳಲ್ಲಿ ಅಂತಿಮ ಮತದಾನದ ಪ್ರಮಾಣವು ಶೇಕಡಾ 30ರಷ್ಟು ಹೆಚ್ಚಾಗಿದೆ ಎಂದು ದೂರು ನೀಡಿತ್ತು. ಇದು ಮತ ಪೆಟ್ಟಿಗೆಗಳನ್ನು ಅಕ್ರಮವಾಗಿ ತುಂಬಿಸುವ ಸಂಶಯಕ್ಕೆ ದಾರಿ ಮಾಡಿಕೊಡುತ್ತದೆ” ಎಂದಿದ್ದಾರೆ.
“ಮತಗಟ್ಟೆಯಲ್ಲಿ ಚಲಾವಣೆಯಾದ ನಿಖರ ಮತಗಳ ಅಧಿಕೃತ ದಾಖಲೆಯಾಗಿರುವ ಫಾರ್ಮ್ 17ಸಿಯನ್ನು ಸಾರ್ವಜನಿಕಗೊಳಿಸಲು ಆಯೋಗ ನಿರಂತರವಾಗಿ ನಿರಾಕರಿಸುತ್ತಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿಯಮ 93(2)ರ ಅಡಿಯಲ್ಲಿ ಈ ದಾಖಲೆಗಳನ್ನು ನೀಡುವಂತೆ ಆದೇಶಿಸಿದಾಗ, ಆಯೋಗವು ಹೈಕೋರ್ಟ್ ಆದೇಶವನ್ನು ಪಾಲಿಸುವ ಬದಲು ಕೇಂದ್ರ ಸರಕಾರದೊಂದಿಗೆ ಸೇರಿ ಆ ನಿಯಮವನ್ನೇ ರಾತ್ರೋರಾತ್ರಿ ತಿದ್ದುಪಡಿ ಮಾಡಿತು” ಎಂದು ಅವರು ಬಹಿರಂಗಪಡಿಸಿದರು.
ಆಯೋಗದ ಒಳಗಿನ ಅಸಮಾಧಾನ ಮತ್ತು ಮಾದರಿ ನೀತಿ ಸಂಹಿತೆಯ ಪಕ್ಷಪಾತದ ಜಾರಿಯನ್ನು ಪ್ರಸ್ತಾಪಿಸಿದ ಅವರು, “ವಿರೋಧ ಪಕ್ಷಗಳ ವಿರುದ್ಧ ದೂರು ಬಂದರೆ ತಕ್ಷಣವೇ ಕ್ರಮ ಕೈಗೊಳ್ಳುವ ಆಯೋಗವು, ಆಡಳಿತ ಪಕ್ಷದ ನಾಯಕರು ಕೋಮುದ್ವೇಷದ ಭಾಷಣ ಮಾಡಿದರೆ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತದೆ. 2019ರ ಚುನಾವಣೆಗೆ ಮುನ್ನ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಪ್ರಧಾನಿಯವರ ಪ್ರಚಾರ ಬಿತ್ತರಿಸಿ ನಂತರ ಮರೆಯಾದ ‘ನಮೋ ಟಿವಿ’ ವಿಚಾರದಲ್ಲೂ ಆಯೋಗ ಮೌನವಹಿಸಿತ್ತು” ಎಂದು ದೂರಿದ್ದಾರೆ.
“ಆಯೋಗದ ಒಳಗಿನಿಂದಲೇ ಈ ಅಕ್ರಮಗಳನ್ನು ಪ್ರಶ್ನಿಸಿದ ಚುನಾವಣಾ ಆಯುಕ್ತರೊಬ್ಬರ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದಾಗ, ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು” ಎಂದು ಆಯೋಗದ ಸಾಂಸ್ಥಿಕ ಕುಸಿತವನ್ನು ಅಂಜಲಿ ವಿವರಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿದ ಅಂಜಲಿ ಭಾರದ್ವಾಜ್, “SIR ಪ್ರಕ್ರಿಯೆಯು ದೇಶಾದ್ಯಂತ ಅಪಾರ ಆತಂಕ ಸೃಷ್ಟಿಸಿದಾಗ ಜನರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಹೋದರು. ಆದರೆ, ಸುಪ್ರೀಂ ಕೋರ್ಟ್ SIR ಜಾರಿಗೆ ತಡೆ ನೀಡದೆ ಮೌನವಾಗಿ ಕುಳಿತಿತು. ಬಂಗಾಳದಲ್ಲಿ 27 ಲಕ್ಷ ಜನರು ತಮಗೆ ಮತದಾನದ ಹಕ್ಕಿನಿಂದ ವಂಚಿಸಲಾಗಿದೆ ಎಂದು ನ್ಯಾಯಾಲಯದ ಬಾಗಿಲು ತಟ್ಟಿದಾಗ, ‘ಈ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಮುಂದಿನ ಬಾರಿ ಚಲಾಯಿಸಬಹುದು’ ಎಂಬ ಸಡಿಲ ಧೋರಣೆಯನ್ನು ಕೋರ್ಟ್ ತಳೆಯಿತು. 1.5 ಬಿಲಿಯನ್ ಜನರ ಮತದಾನದ ಹಕ್ಕಿನ ಮೇಲೆ ಪ್ರಭಾವ ಬೀರುವ ಈ ಗಂಭೀರ ವಿಚಾರ ವಿಚಾರಣೆಯಾಗದೇ ನಿಷ್ಕ್ರಿಯವಾಗಿ ಬಾಕಿ ಬಿದ್ದಿದೆ” ಎಂದು ಅಂಜಲಿ ಖೇದ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ತನ್ನ ಸಾಂವಿಧಾನಿಕ ಜವಾಬ್ದಾರಿಯಾದ ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವಲ್ಲಿ ಚುನಾವಣಾ ಆಯೋಗವು ಸಂಪೂರ್ಣವಾಗಿ ವಿಫಲವಾಗಿದೆ. ಪಾರದರ್ಶಕತೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಾಂಸ್ಥಿಕ ನಂಬಿಕೆಯನ್ನು ನಾಶಮಾಡಲಾಗಿದೆ” ಎಂದು ಪ್ರತಿಪಾದಿಸಿದ್ದಾರೆ.
“ಈ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳ ಫಲಿತಾಂಶಗಳ ಮೇಲೆಯೇ ಇಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ನ್ಯಾಯಾಂಗವು ತಕ್ಷಣವೇ ಜಾಗೃತಗೊಂಡು ಈ ಸಾಂವಿಧಾನಿಕ ಉಲ್ಲಂಘನೆಗಳನ್ನು ಸರಿಪಡಿಸದಿದ್ದರೆ, ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ಕುಸಿದುಬೀಳಲಿದೆ” ಎಂದು ಅಂಜಲಿ ಭಾರದ್ವಾಜ್ ಅವರು ತಮ್ಮ ಭಾಷಣದಲ್ಲಿ ಎಚ್ಚರಿಸಿದ್ದಾರೆ.






